ನ್ಯೂಸ್ ನಾಟೌಟ್: ರಸ್ತೆಯಲ್ಲಿ ಮಲಗಿದ್ದ ಹಸುಗಳ ಗುಂಪಿನ ಮೇಲೆ ಅಪರಿಚಿತ ವಾಹನವೊಂದು ಹರಿದು ಎರಡು ಹಸುಗಳು ವಿಲವಿಲ ಒದ್ದಾಡಿ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯಲ್ಲಿ ನಡೆದಿದೆ.
ಕಲ್ಲುಗುಂಡಿ ಕೂಲಿಶೆಡ್ ಸಮೀಪದ ಬೊಳುಗಲ್ಲು ಕಾಂಪ್ಲೆಕ್ಸ್ ಹಾಗೂ ಪೆಟ್ರೋಲ್ ಪಂಪ್ ಬಂಕ್ ಬಳಿ ತಲಾ ಒಂದೊಂದು ದನಗಳು ರಕ್ತಸಿಕ್ತವಾಗಿ ಬಿದ್ದಿದೆ. ಬೊಳುಗಲ್ಲು ಕಾಂಪ್ಲೆಕ್ಸ್ ಬಳಿ ಅಪಘಾತವಾಗಿ ಒಂದು ದನ ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಮತ್ತೊಂದು ದನ ಅಣತಿ ದೂರದ ತನಕ ಸಾಗಿ ಅಲ್ಲಿ ಸಾವಿಗೀಡಾಗಿದೆ ಎಂದು ತಿಳಿದು ಬಂದಿದೆ. ದನದ ಶವದ ಬಳಿ ಇತರೆ ದನಗಳು ಬಂದು ಮೂಕ ರೋಧನ ವ್ಯಕ್ತಪಡಿಸುತ್ತಿರುವ ದೃಶ್ಯ ನೆರೆದವರ ಮನ ಕಲಕುವಂತಿತ್ತು.
ವಾರಗಳ ಹಿಂದೆಯಷ್ಟೇ ದನಗಳು ಸಾವಿಗೀಡಾಗಿದ್ದವು. ಇದೀಗ ಮತ್ತೊಂದು ಸಲ ದನಗಳು ಸಾವಿಗೀಡಾಗಿವೆ. ವಾರಿಸುದಾರರಿಲ್ಲದ ಐವತ್ತಕ್ಕೂ ಹೆಚ್ಚು ದನಗಳು ಕಲ್ಲುಗುಂಡಿಯಲ್ಲಿ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗುತ್ತಿವೆ. ಇದರಿಂದ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ನಿರ್ಮಾಣಗೊಂಡಿದೆ. ದನಗಳನ್ನು ಮಾಲೀಕರು ರಸ್ತೆಗೆ ಬಿಡುವ ಮೊದಲು ಯೋಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯ ಗ್ರಾಮ ಪಂಚಾಯತ್ ಸಂಪಾಜೆ ಮೃತ ಹಸುಗಳನ್ನು ಸ್ಥಳದಿಂದ ತೆರವುಗೊಳಿಸಿದೆ.