ಬೆಂಗಳೂರು: ‘ಮುಖ್ಯಮಂತ್ರಿಯ ಸುಪರ್ದಿಯಲ್ಲಿಯೇ 24/7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ’ ಇದೆ ಎಂದು ನೀವು ಹೇಳುತ್ತೀರಿ. ಆದರೆ, ಶೇ 40 ಕಮಿಷನ್ ಬಗ್ಗೆ ಗುತ್ತಿಗೆದಾರರು ಪ್ರಧಾನಿ ಕಚೇರಿಗೆ ಪತ್ರ ಬರೆದರೂ ಉತ್ತರ ಇಲ್ಲ ಎಂದು ಜನ ಮಾತನಾಡುತ್ತಿದ್ದಾರೆ. ಇದೇನಾ ನಿಮ್ಮ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ರೈತರಿಗೆ ಲಾಭದಾಯಕ ಬೆಂಬಲ ಬೆಲೆ ಎನ್ನುತ್ತೀರಿ. ಎಂಎಸ್ಪಿ ಲೆಕ್ಕದಲ್ಲಿಯೇ ಮೋಸ, ಎಂಎಸ್ಪಿ ದರದಲ್ಲಿ ಬೆಳೆ ಖರೀದಿಸುವವರೇ ಇಲ್ಲ. ರೈತರಿಗೆ ಅಚ್ಛೇ ದಿನ್ ಯಾವಾಗ ಮೋದಿಯಯವರೇ’ ಎಂದೂ ಕೇಳಿದ್ದಾರೆ.
‘ಸಣ್ಣ ಕೈಗಾರಿಕೆಗಳಿಗೆ ₹ 6,000 ಕೋಟಿ ನೆರವು ಎನ್ನುತ್ತೀರಿ. ಆದರೆ, ಎರಡು ವರ್ಷಗಳಲ್ಲಿ 754 ಕೈಗಾರಿಕೆಗಳಿಗೆ ಬೀಗ, 44,000 ಉದ್ಯೋಗ ನಷ್ಟವಾಗಿದೆ. ಎಲ್ಲಿದೆ ನಿಮ್ಮ ವರ್ಷಕ್ಕೆ ಎರಡು ಕೋಟಿ ಉದ್ಯೋಗ’ ಎಂದೂ ಪ್ರಶ್ನಿಸಿದ್ದಾರೆ. ‘2022ಕ್ಕೆ ಎಲ್ಲರ ಮನೆಗೆ ವಿದ್ಯುತ್ ಎಂದೂ ಹೇಳುತ್ತೀರಿ. ದಿನಕ್ಕೆ ಕನಿಷ್ಠ 10 ಗಂಟೆಯೂ ವಿದ್ಯುತ್ ಇಲ್ಲ. ಮಹಿಳೆಯರು ಮಸಾಲೆ ಅರೆಯಲು ವಿದ್ಯುತ್ ಕಚೇರಿಗೆ ಹೋಗಿದ್ದರಂತೆ. ಇದಕ್ಕಾಗಿಯೇ ಜನರಿಗೆ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ರಾ ಮೋದಿಯವರೇ’ ಎಂದೂ ಕುಟುಕಿದ್ದಾರೆ.