ನ್ಯೂಸ್ ನಾಟೌಟ್: ಅವೈಜ್ಞಾನಿಕ ಕಿಂಡಿ ಅಣೆಕಟ್ಟು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದ ಹಲವು ಜನರ ಬದುಕನ್ನೇ ಕಸಿದುಕೊಂಡಿದೆ. ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟು ಅವಾಂತರದಿಂದ ಐದಾರು ಮನೆಗಳು ಪ್ರವಾಹದಲ್ಲಿ ಹಲವು ಸಲ ಮುಳುಗಿ ಎದ್ದಿದ್ದು ಇದೀಗ ಚಟ್ಟೆಕಲ್ಲಿನಲ್ಲೂ ಪಯಸ್ವಿನಿ ನದಿಯ ಅವಾಂತರದಿಂದ ಇಂತಹುದೇ ಸನ್ನಿವೇಶ ನಿರ್ಮಾಣವಾಗಿದೆ.
ಪಯಸ್ವಿನಿ ನದಿ ನೀರಿನ ಪ್ರವಾಹದ ಹೊಡೆತಕ್ಕೆ ಸಿಲುಕಿ ಕೃಷಿಕರೊಬ್ಬರ ಫಸಲಿಗೆ ಬರಲು ರೆಡಿಯಾಗಿದ್ದ ಅಡಿಕೆ ಗಿಡಗಳೆಲ್ಲ ಕೆಸರು ಪಾಲಾಗಿದೆ. ಸಾವಯವ ಗೊಬ್ಬರ ಹಾಕಿ ಕಷ್ಟ ಪಟ್ಟು ಗಿಡ ನೆಟ್ಟ ಕೃಷಿಕ ಈಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಭಾನುವಾರ ತಡರಾತ್ರಿ ಕೊಡಗಿನ ಜೋಡುಪಾಲ ಕಡೆಗೆ ಭಾರಿ ಜಲಸ್ಫೋಟ ಆಗಿದೆ. ಎಲ್ಲರೂ ಗಾಢ ನಿದ್ರೆಯಲ್ಲಿರುವಾಗಲೇ ಬೃಹತ್ ಆಕಾರದ ಮರಗಳು, ಕೆಸರು ಮಿಶ್ರಿತ ನೀರನ್ನು ಹೊತ್ತುಕೊಂಡು ಸಿಕ್ಕಸಿಕ್ಕ ಕಡೆಗೆ ನುಗ್ಗುತ್ತಾ ಪಯಸ್ವಿನಿ ಉಕ್ಕಿ ಹರಿದಿದ್ದಾಳೆ. ಚಟ್ಟೆಕಲ್ಲು –ಊರು ಬೈಲು ಸಂಪರ್ಕಿಸುವ ಸೇತುವೆ ಬಳಿ ನಿವೃತ್ತ ಪ್ರಾಂಶುಪಾಲ, ಪ್ರಗತಿ ಪರ ಕೃಷಿಕ ಎಂ.ಎಸ್.ಭಟ್ ಬಹಳಷ್ಟು ಕನಸು ಇಟ್ಟುಕೊಂಡು ಪ್ರಯೋಗಶೀಲರಾಗಿ ಇನ್ನೂರು ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಆದರೆ ಭಾನುವಾರದ ಪ್ರವಾಹಕ್ಕೆ ಸಿಲುಕಿ ಇವರ ತೋಟವೆಲ್ಲ ಕೆಸರುಮಯವಾಗಿದೆ. ಅಡಿಕೆ ಗಿಡಗಳಿಗೆಲ್ಲ ಭಾರಿ ಪ್ರಮಾಣದ ಹಾನಿಯಾಗಿದೆ. ಕೆಲವು ಅಡಿಕೆ ಗಿಡಗಳು ಇನ್ನೇನು ಫಸಲಿಗೆ ಬರಲು ಸಿದ್ಧವಾಗಿದ್ದವು. ಆದರೆ ಹಿಂಗಾರಕ್ಕೆ ಕೆಸರು ನೀರು ತಾಗಿ ಅದು ಅಲ್ಲೆ ಕೊಳೆತು ಹೋಗಿದೆ. ಇನ್ನೂ ಕೆಲವು ಗಿಡಗಳು ಮಣ್ಣಿನಲ್ಲಿ ಹೂತು ಹೋಗಿದೆ.
ಸದ್ಯ ಎಲ್ಲ ಅಡಿಕೆ ಗಿಡಗಳ ಬುಡದಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು ತಕ್ಷಣ ತೆಗೆಸದಿದ್ದರೆ ಎಲ್ಲ ಗಿಡಗಳು ಸಾಯಬಹುದು. ಇದಕ್ಕಾಗಿ ಸಾವಿರಾರು ರೂ. ಖರ್ಚು ಇದೆ ಎಂದು ಹೇಳುತ್ತಾರೆ ಎಂ.ಎಸ್.ಭಟ್ . ೪ ದಶಕದಿಂದ ಇಲ್ಲಿ ತನಕ ನೀರು ಬಂದಿದ್ದು ಇಲ್ಲ. ಆದರೆ ಈ ವರ್ಷ ೪ ಸಲ ಪ್ರವಾಹದ ನೀರು ನಮ್ಮ ತೋಟಕ್ಕೆ ನುಗ್ಗಿ ಕೃಷಿಯನ್ನೆಲ್ಲ ನುಂಗಿದೆ ಎಂದು ಎಂ.ಎಸ್.ಭಟ್ ನೋವು ತೋಡಿಕೊಂಡರು.
ಪ್ರವಾಹದ ನೀರಿನಲ್ಲಿ ಭಾರಿ ಗಾತ್ರದ ಮರಗಳು ತೇಲಿ ಬಂದಿದೆ. ಇದು ಕಿಂಡಿಅಣೆಕಟ್ಟಿನಲ್ಲಿ ರಾಶಿರಾಶಿ ಸಿಕ್ಕಿ ಹಾಕಿಕೊಂಡಿದೆ. ಆಗ ನೀರು ಕಟ್ಟಿ ನಿಂತುಕೊಂಡು ಎಂ.ಎಸ್.ಭಟ್ ಅವರ ತೋಟಕ್ಕೆ ನುಗ್ಗಿದೆ. ಇದರಿಂದ ಇವರ ಅಡಿಕೆ ಗಿಡಗಳಿಗೆಲ್ಲ ಹಾನಿಯಾಗಿದೆ.
ಕೊಯನಾಡಿನಲ್ಲಿ ಅವಾಂತರ ಸೃಷ್ಟಿಸಿದ್ದ ಅವೈಜ್ಞಾನಿಕ ಕಿಂಡಿ ಅಣೆಕಟ್ಟಿನಂತೆ ಊರುಬೈಲು-ಚಟ್ಟೆಕಲ್ಲು ಸಂಪರ್ಕ ಕಲ್ಪಿಸುವ ಸೇತುವೆಯಲ್ಲೂ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ ಎಂದು ಎಂ.ಎಸ್.ಭಟ್ ಕಿಡಿಕಾರಿದ್ದಾರೆ. ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಅವರು, ಸೇತುವೆ ಕಟ್ಟುವ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗುತ್ತದೆ. ಕಿಂಡಿ ಅಣೆಕಟ್ಟಿನಿಂದ ಪ್ರಯೋಜನ ಇದೆ ಎಂದೆಲ್ಲ ಹೇಳಿ ನಂಬಿಸಿ ವಂಚಿಸಿದ್ದಾರೆ. ಅವೈಜ್ಞಾನಿಕ ಅಣೆಕಟ್ಟಿನಿಂದ ನಮ್ಮ ಕೃಷಿ ತೋಟಗಳೆಲ್ಲ ನೀರು ಪಾಲಾಗಿ ಜಾಗವೂ ಈಗ ಹೊಳೆ ನೀರಿಗೆ ಸೇರಿಕೊಂಡಿದೆ. ಚೆಂಬು ಗ್ರಾಮ ಪಂಚಾಯತ್ ನ ಗ್ರಾಮ ಲೆಕ್ಕಾಧಿಕಾರಿ (ವಿಎ) ಬಂದು ವೀಕ್ಷಿಸಿದ್ದು ಬಿಟ್ಟರೆ ಜನಪ್ರತಿನಿಧಿಗಳು ಇದುವರೆಗೆ ನನ್ನ ತೋಟವನ್ನು ನೋಡಿ ನಮಗೊಂದು ನ್ಯಾಯ ಕೊಡಿಸುವ ಪ್ರಯತ್ನ ಮಾಡಿಲ್ಲ. ಇದು ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ. ನಿವೃತ್ತಿ ನಂತರ ನಾನೊಬ್ಬ ಕೃಷಿಕನಾಗಿ ನನ್ನ ಜೀವನವನ್ನು ಕಟ್ಟಿಕೊಂಡು ಬಂದಿದ್ದೇನೆ. ಆದರೆ ಈ ರೀತಿ ಕಿಂಡಿ ಅಣೆಕಟ್ಟು ನಿರ್ಮಿಸಿ ನಮ್ಮ ಬದುಕಿಗೆ ಏಕೆ ಕೊಳ್ಳಿ ಇಟ್ಟಿದ್ದೀರಿ? ನಮ್ಮ ಜೀವನವನ್ನು ಏಕೆ ಕತ್ತಲಾಗಿಸಿದ್ದೀರಿ? ಎಂದು ಎಂ.ಎಸ್.ಭಟ್ ನೋವಿನಿಂದ ಪ್ರತಿಕ್ರಿಯಿಸಿದ್ದಾರೆ.
ಹೊಸ ಸೇತುವೆ ಕಟ್ಟುವ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟಿನಿಂದ ಪ್ರಯೋಜನ ಇದೆ ಎಂದೆಲ್ಲ ಹೇಳಿ ನಂಬಿಸಿ ವಂಚಿಸಿದ್ದಾರೆ. ಅವೈಜ್ಞಾನಿಕ ಅಣೆಕಟ್ಟಿನಿಂದ ಈಗ ನಮ್ಮ ಕೃಷಿ ತೋಟಗಳೆಲ್ಲ ನೀರು ಪಾಲಾಗಿ ಜಾಗವೂ ಈಗ ಹೊಳೆ ನೀರಿಗೆ ಸೇರಿಕೊಂಡಿದೆ.
ಎಂ.ಎಸ್.ಭಟ್, ನಿವೃತ್ತ ಪ್ರಾಂಶುಪಾಲ, ಪ್ರಗತಿ ಪರ ಕೃಷಿಕ