ನ್ಯೂಸ್ ನಾಟೌಟ್: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜ್ಯದ ಪ್ರತಿಷ್ಠಿತ ಮಠವೊಂದರಲ್ಲಿ ನಡೆದಿದೆ. ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಮುರುಘಾ ಮಠದ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ಆ ಮಕ್ಕಳ ಮೇಲೆ ಸ್ವಾಮೀಜಿಯವರು ನಿರಂತರ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಕಿರುಕುಳದಿಂದ ಬೇಸತ್ತ ಮಕ್ಕಳು ರಾಜಧಾನಿ ಬೆಂಗಳೂರಿಗೆ ಬಂದು ಅಲ್ಲಿ ದೂರು ದಾಖಲಿಸಲು ಪ್ರಯತ್ನ ಮಾಡಿದ್ದಾರೆ. ಅಲ್ಲಿ ಸಾಧ್ಯವಾಗದಿದ್ದಾಗ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಒಬ್ಬರು ಆಟೋ ಚಾಲಕ ಅವರಿಗೆ ಸಹಾಯ ಮಾಡಿದ್ದಾರೆ. ಒಡನಾಡಿ ಸಂಸ್ಥೆಯ ಬಳಿ ಹೋಗಿ ನ್ಯಾಯ ಸಿಗುತ್ತದೆ ಎಂದು ಆಟೋ ಚಾಲಕರು ಕಳುಹಿಸಿಕೊಟ್ಟರು ಎಂದು ಒಡನಾಡಿ ಸಂಸ್ಥೆ ಮಾಹಿತಿ ನೀಡಿದೆ. ಆ ಇಬ್ಬರು ಮಕ್ಕಳ ಜೊತೆ ಆಪ್ತ ಸಮಾಲೋಚನೆ ಮಾಡಲಾಗಿದೆ. ಸ್ವಾಮೀಜಿಯವರ ಕಿರುಕುಳವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು ಎಂದು ಸಂಸ್ಥೆ ಹೇಳಿದೆ. ತಕ್ಷಣ ನಾವು ಮಕ್ಕಳ ಹಕ್ಕುಗಳ ರಕ್ಷಣಾ ಕೇಂದ್ರದವರಿಗೆ ವಿಚಾರ ತಲುಪಿಸಿದೆವು. ಅವರೂ ಸಹ ಕೌನ್ಲಿಲಿಂಗ್ ಮಾಡಿದ್ದಾರೆ. ಮಕ್ಕಳ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಖಚಿತವಾದ ನಂತರ ನಿನ್ನೆ ರಾತ್ರಿ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂದು ಒಡನಾಡಿ ಹೇಳಿದೆ.
ಶಿವಮೂರ್ತಿ ಶರಣರು ಸೇರಿ ಐವರು ವಿರುದ್ದ ದೂರು ದಾಖಲಾಗಿದೆ. ಉಳಿದ ನಾಲ್ವರು ಲೈಂಗಿಕ ದೌರ್ಜನ್ಯಕ್ಕೆ ಸ್ವಾಮೀಜಿಗೆ ಸಹಾಯ ಮಾಡುತ್ತಿದ್ದರು. ನಮ್ಮ ಬಳಿ ದೂರು ಬರುತ್ತಿದ್ದಂತೆ ಬಹಳಷ್ಟು ಒತ್ತಡಗಳು ಬಂದಿವೆ. ನಾವು ಅದಾವುದನ್ನು ಲೆಕ್ಕಿಸದೆ ಮಕ್ಕಳಿಗೆ ನ್ಯಾಯ ಒದಗಿಸಲಷ್ಟೇ ಹೆಜ್ಜೆ ಇಟ್ಟಿದ್ದೇವೆ. ಸ್ವಾಮೀಜಿಯವರು ವಿಚಾರವಂತರು, ಪ್ರಜ್ಞಾವಂತರು, ಪ್ರಗತಿಪರರು ಎಂಬ ಭಾವನೆ ಇತ್ತು. ಮಕ್ಕಳ ಹೇಳಿಕೆ ಬಳಿಕ ಸ್ವಾಮೀಜಿಯವರ ಬಗ್ಗೆ ನಮಗೆ ಅಸಹ್ಯ ಹುಟ್ಟಿಸಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹ ಮಾಡುತ್ತಿದ್ದೇವೆ. ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವ ಕಾರಣ ನ್ಯಾಯಾಧೀಶರ ಮೂಲಕವೇ ತನಿಖೆ ಆಗಬೇಕು. ಸ್ವಾಮೀಜಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಪ್ರಭಾವಿಗಳಾಗಿದ್ದಾರೆ.