ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದಕ್ಕೆ ಕೆಲವೇ ದಿನಗಳು ಬಾಕಿ ಇದೆ ಅನ್ನುವಷ್ಟರಲ್ಲಿ ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಜಾಲತಾಣದಲ್ಲಿ ಅಭಿಯಾನ ಆರಂಭವಾಗುತ್ತಿದೆ. ಇದರಿಂದಾಗಿ ಬಿಜೆಪಿ ಪಾಳಯದಲ್ಲಿ ಒಂದಷ್ಟು ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಜತೆಗೆ ಸಂಸದನ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕರಾವಳಿ ಬಿಜೆಪಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಇದ್ದೇ ಇದೆ ಅನ್ನುವುದು ಪಕ್ಷದ ಒಳಗಿನಿಂದ ಕೇಳಿ ಬರುತ್ತಿರುವ ಮಾತು. ಅದರಲ್ಲೂ ಇತ್ತೀಚೆಗೆ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಳಿಕ ಆಕ್ರೋಶ ಸ್ಫೋಟಗೊಂಡಿದೆ. ನಳಿನ್ ಅವರ ಕಾರನ್ನೇ ಪಕ್ಷದ ಕಾರ್ಯಕರ್ತರು ಅಲ್ಲಾಡಿಸಿದ್ದರು. ಸಹಜವಾಗಿಯೇ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದು ಸಹಜವಾಗಿಯೇ ನಡೆದಿದೆ. ವೈಯಕ್ತಿಕವಾಗಿ ನನ್ನ ಮೇಲೆ ಯಾವುದೇ ಸಿಟ್ಟಿಲ್ಲ ಎಂದು ನಳಿನ್ ಸಮಜಾಯಿಷಿ ಕೂಡ ನೀಡಿದರು. ಆದರೆ ಇದೀಗ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ನಳಿನ್ ಬದಲಾವಣೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಮೋದಿ ಮಂಗಳೂರು ಭೇಟಿಯ ವೇಳೆ ನಳಿನ್ ವಿರುದ್ಧದ ಘೋಷಣೆಗಳು ಮೊಳಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಒಂದು ಸಲ ಘೋಷಣೆ ಕೂಗಿಸಿಕೊಂಡು ಮುಖಭಂಗಕ್ಕೆ ಒಳಗಾಗಿರುವ ನಳಿನ್ ಕುಮಾರ್ ಕಟೀಲ್ ಮತ್ತೊಂದು ಸಲ ಇಂತಹ ಮುಜುಗರಕ್ಕೆ ಒಳಗಾಗುವರೇ ಅನ್ನುವುದನ್ನು ಕಾದು ನೋಡಬೇಕಿದೆ.