ನ್ಯೂಸ್ ನಾಟೌಟ್: ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಹಾಗೂ ಆರ್.ಜೆ. ತ್ರಿಶೂಲ್ ನಡುವಿನ ಮತ್ತೊಂದು ಸುತ್ತಿನ ಟಾಕ್ ವಾರ್ ಶುರುವಾಗಿದೆ. ಗುಂಡಿ ತುಂಬಿಕೊಂಡ ರಸ್ತೆಗಳನ್ನು ಸರಿಪಡಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಗರ ಪಂಚಾಯತ್ ಅಧ್ಯಕ್ಷರಿಗೆ ತ್ರಿಶೂಲ್ ಸವಾಲೆಸೆದ ಬೆನ್ನಲ್ಲೇ ವೈಯಕ್ತಿಕ ಅವಮಾನ ಎಂದು ವಿನಯ್ ಗಂಭೀರವಾಗಿ ಪರಿಗಣಿಸಿದಂತಿದೆ. ತಮ್ಮ ಸಿಬ್ಬಂದಿಗೆ ಹೇಳಿ ಗುಂಡಿ ಮುಚ್ಚಿಸುವ ಬದಲು ವಿನಯ್ ಪೊಲೀಸ್ ಠಾಣೆ ಮೆಟ್ಟಿಲೇರಿ ಮತ್ತೊಂದು ಸುತ್ತಿನ ಅನಾವಶ್ಯಕ ಚರ್ಚೆಗೆ ಕಾರಣವಾಗಿದ್ದಾರೆ.
ಸುಳ್ಯ ನಗರದ ಪೇಟೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ಜಂಕ್ಷನ್ ನಲ್ಲಿ ದೊಡ್ಡ ಗುಂಡಿಗಳು ಬಾಯ್ತೆರೆದು ಕೊಂಡಿವೆ. ಇದನ್ನೇ ಇತ್ತೀಚೆಗೆ ಆರ್ ಜೆ ತ್ರಿಶೂಲ್ ಅವರು ಪ್ರಶ್ನೆ ಮಾಡಿದ್ದರು. ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ತ್ರಿಶೂಲ್ ಹೇಳಿದ್ದು ಸರಿ ಎಂದು ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಈ ವಿಚಾರ ಅರಿತ ನಗರ ಪಂಚಾಯತ್ ಅಧ್ಯಕ್ಷರು ನಿಗಿನಿಗಿ ಕೆಂಡದಂತಾಗಿದ್ದರು. ಇವನು ಕೀ ಬೋರ್ಡ್ ವಾರಿಯರ್ ಎಂದು ತ್ರಿಶೂಲ್ ಗೆ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಕಾಲೆಳೆದಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ತ್ರಿಶೂಲ್ , ನೀವು ಸರಿ ಅನ್ನುವುದು ನಿಜವಾಗಿದ್ದರೆ ಬಹಿರಂಗವಾಗಿ ನನ್ನೊಂದಿಗೆ ಲೈವ್ ಗೆ ಬನ್ನಿ. ಅಲ್ಲಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದರು. ಇಬ್ಬರ ನಡುವಿನ ಈ ಆಡಿಯೋ ವೈರಲ್ ಆಗಿತ್ತು.
ತ್ರಿಶೂಲ್ ಹಾಕಿದ ಆಡಿಯೋ ಕೇಳಿ ನಗರ ಪಂಚಾಯತ್ ಅಧ್ಯಕ್ಷರು ಉರಿದುಕೊಳ್ಳುವುದಕ್ಕೆ ಕಾರಣವೇನು? ಎನ್ನುವುದನ್ನು ನೋಡಿದಾಗ ಮೊದಲು ತಿಳಿಯವುದು ವಾಲ್ ನಲ್ಲಿರುವ ಕಾಮೆಂಟ್. ಹೌದು, ಇಲ್ಲಿ ವಿನಯ್ ಪರವಾಗಿ ಕಾಮೆಂಟ್ ಮಾಡಿದವರು ಬೆರಳೆಣಿಕೆ. ಆದರೆ ಸಮಸ್ಯೆ ಇದೆ ಅದನ್ನು ಪರಿಹರಿಸಿಲ್ಲ ಎಂದು ಅಸಮಾಧಾನದಿಂದ ಬೈದು ಬರೆದವರು ತುಂಬಾ ಜನ ಇದ್ರು. ಕೆಲವರು ಅಧ್ಯಕ್ಷರನ್ನು ಕೆಟ್ಟ ಪದಗಳಿಂದಲೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣದಿಂದ ವಿನಯ್ ಸಿಡಿಮಿಡಿಗೊಂಡಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇಂದು (ಆ.೧೯) ಮಧ್ಯಾಹ್ನ ೧ ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಿಂದ ತ್ರಿಶೂಲ್ ಅವರಿಗೆ ಕರೆ ಬಂದಿದೆ. ಈ ಕರೆ ಬಂದಿರುವುದು ನಿಜಾನಾ? ಅಥವಾ ಸುಳ್ಳಾ? ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ನ್ಯೂಸ್ ನಾಟೌಟ್ ತಂಡವು ಸುಳ್ಯ ಠಾಣೆಯ ಸಬ್ ಇನ್ಸ್ಪೆಕ್ಟರ್ ದಿಲೀಪ್ ಅವರಿಗೆ ಕರೆ ಮಾಡಿ ಮಾಹಿತಿ ಕೇಳಿತು. ಈ ಬಗ್ಗೆ ಪ್ರತಿಕ್ರಿಯಿಸಿದ ದಿಲೀಪ್ ಅವರು, ನಮಗೆ ನಗರ ಪಂಚಾಯತ್ ಅಧ್ಯಕ್ಷರು ದೂರು ನೀಡಿದ್ದಾರೆ. ಅವರನ್ನು ಅವಾಚ್ಯ ಶಬ್ಧಗಳಿಂದ ಬೇರೆಯವರ ಮೂಲಕ ಜಾಲತಾಣದಲ್ಲಿ ಕೆಟ್ಟದಾಗಿ ತ್ರಿಶೂಲ್ ಕಾಮೆಂಟ್ ಮಾಡಿಸಿದ್ದಾರೆ ಎಂದು ತಿಳಿಸಲಾಗಿದೆ. ಈ ಕೇಸಿಗೆ ಸಂಬಂಧಪಟ್ಟಂತೆ ನಾವು ಯಾವುದೇ ಎಫ್ಐಆರ್ ಮಾಡಿಲ್ಲ. ತ್ರಿಶೂಲ್ ಅವರನ್ನು ಠಾಣೆಗೆ ವಿಚಾರಣೆಗೆ ಬರುವುದಕ್ಕೆ ಹೇಳಿದ್ದೇವೆ ಎಂದು ತಿಳಿಸಿದರು.
ಈ ಬಗ್ಗೆ ನ್ಯೂಸ್ ನಾಟೌಟ್ ತಂಡಕ್ಕೆ ಪ್ರತಿಕ್ರಿಯಿಸಿದ ತ್ರಿಶೂಲ್ ಅವರು, ನ್ಯಾಯ ಕೇಳಿದ ನನ್ನ ಮೇಲೆ ಸುಮ್ಮನೆ ದೂರು ನೀಡಿದ್ದಾರೆ. ಇಂತಹ ಬೆದರಿಕೆಯಿಂದ ವಾಕ್ ಸ್ವಾತಂತ್ರ್ಯವನ್ನು ಯಾರಿಗೂ ಕಿತ್ತುಕೊಳ್ಳುವುದಕ್ಕೆ ಆಗುವುದಿಲ್ಲ. ಪೊಲೀಸ್ ಠಾಣೆಯಿಂದ ನಾನು ಇಂದು ಮಧ್ಯಾಹ್ನ ಕರೆ ಸ್ವೀಕರಿಸಿದ್ದೇನೆ. ನನ್ನನ್ನು ಠಾಣೆಗೆ ಬರುವುದಕ್ಕೆ ಹೇಳಿದ್ದಾರೆ. ನಾನು ಮೈಸೂರಿನಲ್ಲಿದ್ದೇನೆ. ತಕ್ಷಣ ಬರುವುದಕ್ಕೆ ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಈ ಘಟನೆ ಆಗುತ್ತಿದ್ದಂತೆ ನಾನು ವಕೀಲರನ್ನು ಸಂಪರ್ಕಿಸಿದ್ದೇನೆ. ಅವರು ನೋಟಿಸ್ ಬಾರದೆ ಠಾಣೆಗೆ ಹೋಗದಂತೆ ಸೂಚಿಸಿದ್ದಾರೆ. ಠಾಣೆಯಿಂದ ನೋಟಿಸ್ ಬಂದರಷ್ಟೇ ವಿಚಾರಣೆಗೆ ಹೋಗುವುದಾಗಿ ತಿಳಿಸಿದ್ದಾರೆ.
ನಗರ ಪಂಚಾಯತ್ ಅಧ್ಯಕ್ಷ ವಿನಯ್ ಈ ವಿಚಾರವನ್ನು ತೀರ ದೊಡ್ಡದಾಗಿ ಮಾಡುತ್ತಿರುವುದು ತಪ್ಪು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗೆ ಮಾಡುವುದೇ ಇದ್ದರೆ ಅಧ್ಯಕ್ಷರು ತ್ರಿಶೂಲ್ ತೋರಿಸಿದ ಹೊಂಡವನ್ನು ಮುಚ್ಚಿಸಿ ಅದರ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಹುದಿತ್ತು. ಈ ಮೂಲಕ ನಗರದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಗೆಹರಿಸಿ ತೋರಿಸುತ್ತೇವೆ ಎಂಬ ಸಂದೇಶದ ವಿಡಿಯೋ ಜಾಲತಾಣದಲ್ಲಿ ಹಾಕಿದ್ರೆ ಜನತಾ ಪ್ರಭುಗಳ ಮುಂದೆ ದೊಡ್ಡವರಾಗುತ್ತಿದ್ದರು. ಒಂದು ವಿಡಿಯೋ ಹಾಕಿದ್ರೆ ಜಾಲತಾಣದಲ್ಲಿ ವಿವಿಧ ರೀತಿಯ ಕಾಮೆಂಟ್ ಬರುವುದು ಸಹಜ. ತ್ರಿಶೂಲ್ ಹಾಕಿದ ಸಾಮಾಜಿಕ ಕಳಕಳಿ ವಿಡಿಯೋಗೆ ಯಾರೋ ಒಬ್ಬರು ಕೆಟ್ಟದಾಗಿ ಕಾಮೆಂಟ್ ಮಾಡಿದ್ರೆ ಅದಕ್ಕೆ ತ್ರಿಶೂಲ್ ಹೇಗೆ ಕಾರಣವಾಗುತ್ತಾರೆ? ಹಾಗಾದ್ರೆ ಓಟು ಕೊಟ್ಟು ಗೆಲ್ಲಿಸಿದ ಜನ ಪ್ರತಿನಿಧಿಗಳನ್ನು ಪ್ರಶ್ನೆ ಮಾಡುವುದೇ ಮಹಾಪರಾಧವೇ? ಅನ್ನುವ ಅನುಮಾನ ಕಾಡುತ್ತದೆ. ವಿನಯ್ ಅವರು ಇದೇ ಮೊದಲ ಬಾರಿಗೆ ಅಲ್ಲ ಈ ಹಿಂದೆಯೂ ವಿವಾದದ ಕೇಂದ್ರ ಬಿಂದುವಾಗಿದ್ದರು. ಸುಳ್ಯದ ಕಸದ ಸಮಸ್ಯೆಯನ್ನು ಎತ್ತಿ ಹಿಡಿದುದ್ದಕ್ಕೆ ನಟ ಅನಿರುದ್ಧ್ ಅವರ ವಿರುದ್ಧವೇ ಸಿಡಿಮಿಡಿಗೊಂಡು ಕಾಮೆಂಟ್ ಹಾಕಿದ್ದರು. ಆಗಲೂ ಅಧ್ಯಕ್ಷರ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.