ನವದೆಹಲಿ : ಕೇಂದ್ರ ಸರ್ಕಾರ ರಾಷ್ಟ್ರೀಯ ಧ್ವಜ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿ ತಂದಿದೆ. ಇದರಿಂದಾಗಿ ತ್ರಿವರ್ಣ ಧ್ವಜವನ್ನು ಹಗಲು ಮಾತ್ರವಲ್ಲದೆ ರಾತ್ರಿ ಕೂಡ ಹಾರಿಸಲು ಅನುಮತಿ ನೀಡಿದೆ. ಇದರ ಜತೆಗೆ, ಕೈಮಗ್ಗದಿಂದ ಮಾತ್ರ ತಯಾರಿಸಲಾಗುತ್ತಿದ್ದ ಖಾದಿ ರಾಷ್ಟ್ರಧ್ವಜದ ಜತೆಗೆ ಯಂತ್ರ ಬಳಸಿ ತಯಾರಿಸಲಾಗುವ ಪಾಲಿಸ್ಟರ್ ಧ್ವಜದ ಬಳಕೆಗೂ ಅನುಮತಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸಂಭ್ರಮದಲ್ಲಿ ಆ. 13 ರಿಂದ ಆ. 15ರವರೆಗೆ ‘ಹರ್ ಘರ್ ತಿರಂಗಾ’ ಯೋಜನೆಯನ್ನು ಕೇಂದ್ರ ಘೋಷಿಸಿದ ಬೆನ್ನಲ್ಲೇ ಧ್ವಜ ಸಂಹಿತೆಯಲ್ಲಿ ಈ ಮಹತ್ವದ ಬದಲಾವಣೆ ತರಲಾಗಿದೆ.
‘ಭಾರತದ ಧ್ವಜ ಪ್ರದರ್ಶನ, ಹಾರಾಟ ಹಾಗೂ ಬಳಕೆಯು ಭಾರತದ ಧ್ವಜ ಸಂಹಿತೆ-2002 ಹಾಗೂ ರಾಷ್ಟ್ರೀಯ ಗೌರವ ಅವಮಾನಗಳ ತಡೆ ಕಾಯ್ದೆ-1971 ಮೂಲಕ ನಿರ್ಧರಿಸಲಾಗಿತ್ತದೆ. ಈ ಹಿನ್ನೆಲೆಯಲ್ಲಿ ಧ್ವಜ ಸಂಹಿತೆಗೆ ತಂದ ಹೊಸ ತಿದ್ದುಪಡಿಯ ಪ್ರಕಾರ ಧ್ವಜವನ್ನು ತೆರೆದ ಸ್ಥಳಗಳಲ್ಲಿ, ಮನೆಗಳಲ್ಲಿ ಹಗಲು-ರಾತ್ರಿ ಹಾರಿಸಬಹುದಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಭಲ್ಲಾ ಅವರು ಎಲ್ಲ ಸಚಿವಾಲಯಗಳಿಗೆ ಹಾಗೂ ಇಲಾಖೆಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.