ನ್ಯೂಸ್ ನಾಟೌಟ್ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಮುಖ್ಯ ಕೊಲೆ ಹಂತಕರನ್ನು ಈಗಾಗಲೇ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವರ ವಿಚಾರಣೆಯನ್ನು ಪೊಲೀಸ್ ಇಲಾಖೆ ನಡೆಸುತ್ತಿದೆ. ಸದ್ಯ ಸಿಯಾಬ್ ಸುಳ್ಯ, ಬಶೀರ್ ಎಲಿಮಲೆ, ರಿಯಾಜ್ ಅಂಕತ್ತಡ್ಕ ಕೃತ್ಯದಲ್ಲಿ ಭಾಗಿಯಾಗಿ ಪ್ರವೀಣ್ ನೆತ್ತರು ಹರಿಸಿದವರು ಎನ್ನುವುದು ಖಾತ್ರಿಪಟ್ಟಿದೆ. ಈ ಆರೋಪಿಗಳು ಮಸೂದ್ ಹತ್ಯೆಯಾದ ಬೆನ್ನಲ್ಲೇ ಪ್ರತೀಕಾರಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎನ್ನುವುದು ಖಚಿತಪಟ್ಟಿದೆ.
ಹಂತಕರಲ್ಲಿ ಒಬ್ಬನಾದ ಸಿಯಾಬ್ ಕೊಕ್ಕೋ ವ್ಯಾಪಾರ ಮಾಡಿಕೊಂಡಿದ್ದ. ಮತ್ತೋರ್ವ ಹಂತಕ ರಿಯಾಜ್ ಅಂಕತ್ತಡ್ಕ ಕೋಳಿ ಮಾಂಸದ ಡೀಲಿಂಗ್ ಮಾಡುತ್ತಿದ್ದ, ಇನ್ನೋರ್ವ ಹಂತಕ ಬಶೀರ್ ಎಲಿಮಲೆ ಅನ್ನುವ ವ್ಯಕ್ತಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಈ ಮೂವರು ಹಂತಕರದಲ್ಲಿ ಓರ್ವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕಲ್ಲುಗುಂಡಿ ಭಾಗದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅನ್ನುವುದು ಇದೀಗ ಬೆಳಕಿಗೆ ಬರುತ್ತಿದೆ.
ಸಂಪಾಜೆ ಭಾಗದಲ್ಲಿ ಐದು ವರ್ಷದ ಹಿಂದೆ ಹೋಟೆಲ್ವೊಂದನ್ನು ತರೆಯಲಾಗಿತ್ತು. ಈ ಹೋಟೆಲ್ ನಲ್ಲಿ ಬಶೀರ್ ಎಲಿಮಲೆ ಕೆಲಸಕ್ಕೆಂದು ಸೇರಿಕೊಂಡಿರುತ್ತಾನೆ. ಕೆಲವು ದಿನಗಳ ನಂತರ ಉದ್ಯಮದಲ್ಲಿ ನಷ್ಟವಾಯಿತು ಅನ್ನುವ ಕಾರಣಕ್ಕೆ ಹೋಟೆಲ್ ಅನ್ನು ಮುಚ್ಚಲಾಗುತ್ತದೆ. ನಂತರ ಕಲ್ಲುಗುಂಡಿ ಪೇಟೆಯಲ್ಲಿ ಅದೇ ಹೋಟೆಲ್ ತೆರೆಯಲಾಗುತ್ತದೆ. ಅಲ್ಲಿಯೂ ಕೆಲವು ಸಮಯ ಕೆಲಸ ಮಾಡಿದ್ದ ಬಶೀರ್ ನೆಲೆಯೂರುವುದಕ್ಕೆ ಸಾಧ್ಯವಾಗದೆ ವಾಪಸ್ ತನ್ನೂರಿಗೆ ತೆರಳಿದ್ದ. ಈತ ಪಿಎಫ್ಐ ಸಂಘಟನೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಹಾಗೂ ತನ್ನ ವಾಲ್ ಪೋಸ್ಟರ್ಗಳಲ್ಲಿ ಸಂಘಟನೆಯ ಬಗ್ಗೆ ಸ್ಟೇಟಸ್ ಹಾಕಿಕೊಳ್ಳುತ್ತಿದ್ದ ಎನ್ನಲಾಗಿದೆ.
ಪ್ರವೀಣ್ ಲಾಕ್ ಡೌನ್ ಸಮಯದಲ್ಲಿ ಹಿಂದೂ ಯುವಕರನ್ನು ಒಗ್ಗೂಡಿಸಿ ಬೆಳ್ಳಾರೆಯಲ್ಲಿ ಚಿಕನ್ ಶಾಪ್ ಹಾಕುವುದಕ್ಕೆ ಪ್ರೋತ್ಸಾಹ ನೀಡಿದ್ದರು. ಮಾತ್ರವಲ್ಲದೆ ಹಿಂದೂ ಯುವಕರಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು. ಇದು ಬೆಳ್ಳಾರೆಯಲ್ಲಿ ಶಫೀಕ್, ಝಾಕೀರ್ ಹಾಗೂ ರಿಯಾಜ್ ಅಂಕತ್ತಡ್ಕ ಅವರನ್ನು ಕೆರಳಿಸಿತ್ತು. ಇದೇ ಸಮಯಕ್ಕೆ ಸರಿಯಾಗಿ ಕಳಂಜದಲ್ಲಿ ಮಸೂದ್ ಎಂಬ ಯುವಕ ಹತ್ಯೆಯಾಗುತ್ತದೆ. ಈ ಬೆನ್ನಲ್ಲೇ ಸಿಟ್ಟು ಸ್ಫೋಟಗೊಂಡಿದೆ. ಹತ್ಯೆಗೆ ಪ್ರತೀಕಾರವಾಗಿ ಒಂದು ಹೆಣ ಬೀಳಬೇಕು ಎಂದು ಯೋಚಿಸುತ್ತಿರುವಾಗಲೇ ನೆನಪಾಗಿದ್ದು ಬಿಜೆಪಿ ಹಾಗೂ ಹಿಂದುತ್ವದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಹಾಗೂ ತಮ್ಮ ವ್ಯಾಪಾರ ಚಟುವಟಿಕೆಗಳಲ್ಲಿ ಅಡ್ಡಿಯಾಗಿದ್ದ ಪ್ರವೀಣ್ ನೆಟ್ಟಾರ್. ಈ ಹಿನ್ನೆಲೆಯಲ್ಲಿ ಪ್ರವೀಣ್ ಹತ್ಯೆ ನಡೆದಿದೆ ಎನ್ನುವುದು ತಿಳಿದು ಬಂದಿದೆ.