ನ್ಯೂಸ್ ನಾಟೌಟ್ : ಉಡುಪಿಯ ಬೈಂದೂರಿನಲ್ಲಿ ಶಾಲೆಗೆ ಹೋಗಿ ಮರಳಿ ಬರುವ ವೇಳೆ ಪುಟ್ಟ ಬಾಲಕಿಯೊಬ್ಬಳು ಕಾಲು ಸಂಕದಿಂದ ಜಾರಿ ನೀರಿಗೆ ಬಿದ್ದು ಸಾವಿಗೀಡಾಗಿರುವ ದುರಂತ ನಮ್ಮ ಕಣ್ಣ ಮುಂದಿದೆ. ಇಂತಹುದೇ ಇನ್ನೊಂದು ದುರಂತಕ್ಕಾಗಿ ಇದೀಗ ಊರುಬೈಲ್ ಸಂಪರ್ಕ ಕಲ್ಪಿಸುವ ಸೇತುವೆ ಕಾಯುತ್ತಿದೆ.
ಹೌದು, ಇತ್ತೀಚಿಗೆ ಸುರಿದ ಮಹಾಮಳೆಗೆ ಪಯಸ್ವಿನಿ ನದಿಯಲ್ಲಿ ಉಕ್ಕಿ ಹರಿದ ನೀರಿನ ರಭಸಕ್ಕೆ ಸೇತುವೆಯ ಎರಡೂ ತುದಿಯ ರಸ್ತೆಯು ಕೊಚ್ಚಿ ಕೊಂಡು ಹೋಗಿತ್ತು. ಇದರಿಂದಾಗಿ ಸೇತುವೆ ದ್ವೀಪದಂತಾಗಿತ್ತು. ಇದೀಗ ಸ್ಥಳೀಯರು ಸೇತುವೆಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಅಡಿಕೆಯ ಮರದಿಂದ ನಿರ್ಮಿಸಲಾದ ಒಂದು ಕಾಲು ಸಂಕವನ್ನು ನಿರ್ಮಿಸಿದ್ದಾರೆ. ಇದಕ್ಕೆ ಎರಡೂ ಬದಿಯಲ್ಲಿ ಹಿಡಿದುಕೊಳ್ಳಲೂ ಕೂಡ ಯಾವುದೇ ಆಧಾರವಿಲ್ಲ. ಇದು ತೀರ ಅಪಾಯಕಾರಿಯಾಗಿದ್ದು ಶಾಲೆಗೆ ಹೋಗುವ ಪುಟ್ಟ ಮಕ್ಕಳು, ವಯಸ್ಸಾದವರು ಇದರಲ್ಲಿ ದಾಟಿದ್ದೇ ಆದರೆ ಜಾರಿ ಪಯಸ್ವಿನಿ ನದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತಕ್ಷಣ ಇದನ್ನು ತೆರವುಗೊಳಿಸಿ ಸಂಭವನೀಯ ಭಾರಿ ದುರಂತವನ್ನು ತಪ್ಪಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.