ನ್ಯೂಸ್ ನಾಟೌಟ್ : ಮಡಿಕೇರಿ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾವಿಂದು ಪ್ರಯಾಣಿಸಬಹುದೇ? ಮದೆನಾಡಿನಲ್ಲಿ ಹಠಾತ್ ಗುಡ್ಡ ಕುಸಿತಗೊಂಡ್ರೆ ಏನು ಮಾಡೋದು? ಇವತ್ತು ರಾತ್ರಿ ತುರ್ತಾಗಿ ಬೆಂಗಳೂರಿಗೆ ಹೋಗುವುದಿತ್ತು, ಪ್ರಯಾಣ ಎಷ್ಟು ಸೇಫ್? ಹೀಗೆ ಜನರಲ್ಲಿ ಹತ್ತು ಹಲವಾರು ಪ್ರಶ್ನೆ ಗೊಂದಲಗಳಿವೆ. ಇದನ್ನೆಲ್ಲ ಪರಿಹರಿಸುವುದಕ್ಕಾಗಿ ನ್ಯೂಸ್ ನಾಟೌಟ್ ತಂಡ ಪ್ರಯತ್ನಿಸಿದೆ. ಮಂಗಳೂರು–ಮಡಿಕೇರಿ ವಾಹನ ಪ್ರಯಾಣಿಕರು ಕಂಪ್ಲೀಟ್ ಆಗಿ ಈ ಸ್ಟೋರಿ ಓದಿದ್ರೆ ರಾಷ್ಟ್ರೀಯ ಹೆದ್ದಾರಿಯ ಸದ್ಯದ ಸಮಗ್ರ ಚಿತ್ರಣ ನಿಮ್ಮ ಎದುರಿಗೆ ತೆರೆದುಕೊಳ್ಳುತ್ತೆ.
ಮದೆನಾಡಿನ ಕರ್ತೋಜಿ ಬಳಿ ಭಾರಿ ಬೆಟ್ಟವೊಂದು ರಸ್ತೆಗೆ ಕುಸಿಯುವ ಆತಂಕದಲ್ಲಿದೆ. ಇದರಿಂದಾಗಿ ಮಂಗಳವಾರ ರಾತ್ರಿ 9 ರಿಂದ ಬುಧವಾರ ಬೆಳಗ್ಗೆ 6ರ ತನಕ ಎಲ್ಲ ವಾಹನಗಳನ್ನು ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ಬಂದ್ ಮಾಡಲಾಗಿತ್ತು. ಹಲವಾರು ಪ್ರಯಾಣಿಕರು ಸಂಪಾಜೆ ಗೇಟ್ ನಲ್ಲಿ ಸಿಕ್ಕಿ ಹಾಕಿಕೊಂಡು ಬೆಳಗ್ಗಿನ ತನಕ ಕಾದು ಹೋಗಬೇಕಾಯಿತು. ಇಂದಿನ ಪರಿಸ್ಥಿತಿ ಏನು? ಪ್ರಯಾಣಿಸಬಹುದಾ? ಅಥವಾ ರಾತ್ರಿ ಮತ್ತೆ ರಸ್ತೆ ಬಂದ್ ಆಗುತ್ತಾ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತದೆ. ಬಲ್ಲ ಮಾಹಿತಿಯ ಪ್ರಕಾರ ನಿನ್ನೆಯ ಪರಿಸ್ಥಿತಿಗಿಂತ ಇಂದು ಹೆಚ್ಚು ಭಿನ್ನವಾಗಿಲ್ಲ. ಹೌದು, ಹೆಚ್ಚು ಮಳೆ ಆದ್ರೆ ಯಾವುದೇ ಸಂದರ್ಭದಲ್ಲಿ ರಸ್ತೆ ಬಂದ್ ಆಗಬಹುದು. ಹೀಗಾಗಿ ಪ್ರಯಾಣಿಕರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಪ್ರಯಾಣಿಸಬೇಕು ಅನ್ನುವ ಉದ್ದೇಶದಿಂದ ನ್ಯೂಸ್ ನಾಟೌಟ್ ಜತೆಗೆ ಕೊಡಗಿನ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ನಾಗರಾಜ್ ಅವರು ಮಾತನಾಡಿದ್ದಾರೆ. ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ ಓದಿ.
ಸದ್ಯ ಮಳೆ ಮದೆನಾಡು ಭಾಗದಲ್ಲಿ ನಿಂತಿದೆ. ಹೀಗಾಗಿ ಪ್ರಯಾಣಕ್ಕೆ ಏನು ಸಮಸ್ಯೆ ಇಲ್ಲ ಎಂದು ನ್ಯೂಸ್ ನಾಟೌಟ್ ಗೆ ನಾಗರಾಜ್ ಸ್ಪಷ್ಟಪಡಿಸಿದರು. ನಿನ್ನೆ ಮಳೆಯಿಂದ ಅಪಾಯದ ಸ್ಥಿತಿ ಇದ್ದುದರಿಂದ ರಸ್ತೆ ಸಂಚಾರ ನಿಷೇಧಗೊಳಿಸುವಂತೆ ಕೊಡಗು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿ ರಾತ್ರಿಯಿಡೀ ವಾಹನ ಸಂಚಾರವನ್ನು ರದ್ದುಗೊಳಿಸಿದ್ದರು. ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಬಂದ್ ಆಗಿತ್ತು. ಇಂದು (ಆ.10) ಮಳೆ ಹೆಚ್ಚಾದರೆ ಈಗಾಗಲೇ ಬಿರುಕು ಬಿಟ್ಟಿರುವ ಗುಡ್ಡ ಕುಸಿಯುವ ಸಾಧ್ಯತೆಯೇ ಹೆಚ್ಚಿದೆ. ಇದೀಗ ನಮ್ಮ ಸಿಬ್ಬಂದಿ ಇಲ್ಲಿ ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ. 24/7 ಜೆಸಿಬಿ, ಹಿಟಾಚಿ, ಟಿಪ್ಪರ್ಗಳು ಕಾರ್ಯ ಸನ್ನದ್ಧವಾಗಿದೆ. ಯಾವುದೇ ಕ್ಷಣದಲ್ಲಿ ಅಪಾಯ ಎದುರಾದರೂ ಕೆಲಸ ನಿರ್ವಹಿಸುವುದಕ್ಕೆ ನಾವು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ ಎಂದು ನ್ಯೂಸ್ ನಾಟೌಟ್ ತಿಳಿಸಿದರು.
ಮಂಗಳವಾರದಂತೆ ಇಂದು ಮತ್ತೆ ರಸ್ತೆ ಬಂದ್ ಆಗುತ್ತಾ ಅನ್ನುವ ನ್ಯೂಸ್ ನಾಟೌಟ್ ತಂಡದ ಪ್ರಶ್ನೆಗೆ ಉತ್ತರಿಸಿದ ನಾಗರಾಜ್ ಅವರು, ಮಳೆ ಬಾರದಿದ್ದರೆ ಖಂಡಿತವಾಗಿ ರಸ್ತೆಯಲ್ಲಿ ಪ್ರಯಾಣ ಮಾಡಬಹುದು. ನಾವು ಗುಡ್ಡ ಜರಿಯಬಹುದಾದ ಜಾಗಕ್ಕೆ ಬ್ಯಾರಿಕೇಡ್ ಹಾಕಿದ್ದೇವೆ. ಅಂದ್ರೆ ರಸ್ತೆಯ ಮುಕ್ಕಾಲು ಭಾಗದಲ್ಲಿ ವಾಹನಗಳು ಹೋಗದಂತೆ ತಡೆ ಹಾಕಿದ್ದೇವೆ. ಉಳಿದಿರುವ ರಸ್ತೆಯ ಭಾಗವನ್ನು ಬಿಟ್ಟು ಮೆಟಲ್ ಗಳನ್ನು ಹಾಕಿ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಹೀಗಾಗಿ ರಾತ್ರಿಯ ವೇಳೆಯೂ ವಾಹನಗಳ ಸಂಚಾರಕ್ಕೆ ಅಡ್ಡಿ ಇಲ್ಲ. ಮಳೆ ಬಂದರೆ ಆದಷ್ಟು ಪ್ರಯಾಣ ಮಾಡದಿರುವುದೇ ಒಳಿತು ಎಂದು ನ್ಯೂಸ್ ನಾಟೌಟ್ ಗೆ ತಿಳಿಸಿದರು.
ದಿಢೀರ್ ಗುಡ್ಡ ಕುಸಿಯುವ ಭೀತಿ ಇದೆಯೇ ಅನ್ನುವ ನ್ಯೂಸ್ ನಾಟೌಟ್ ತಂಡದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಇಲ್ಲ. ತುಂಬಾ ಮಳೆ ಬಂದರಷ್ಟೇ ಅದು ಕುಸಿಯಬಹುದು. ಈಗಾಗಲೇ ಅದು ಜಾರಿ ನಿಂತುಕೊಂಡಿದ್ದು ಆ ಭಾಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿದಿದ್ದೇವೆ. ಒಂದು ವೇಳೆ ಗುಡ್ಡ ಕುಸಿದರೂ ಅದು ಒಮ್ಮೆಗೆ ಕೆಳಗೆ ಜಾರುವುದಿಲ್ಲ. ಸ್ವಲ್ಪ ಸ್ವಲ್ಪವೇ ಕುಸಿಯುತ್ತಾ ಮಣ್ಣು ಕೆಳಕ್ಕೆ ಬೀಳುತ್ತದೆ. ಹಾಗೆ ಜರಿಯಬಹುದಾದ ಮಣ್ಣು ಈಗಾಗಲೇ ಅಳವಡಿಸಿರುವ ಬ್ಯಾರಿಕೇಡ್ ನಷ್ಟು ಜಾಗಕ್ಕೆ ಬಂದು ಬೀಳಲಿದೆ. ಈ ಭಾಗದಲ್ಲಿ ಶೇ.90 ರಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದೇವೆ. ಇದರ ಹೊರತಾಗಿಯೂ ಅಪಾಯ ಸಂಭವಿಸಿದರೆ ನಮ್ಮ ಸಿಬ್ಬಂದಿ ತಕ್ಷಣಕ್ಕೆ ಕಾರ್ಯನಿರ್ವಹಿಸಲು ಅಲ್ಲಿ ಸಜ್ಜಾಗಿದ್ದಾರೆ ಎಂದು ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದರು.
ಜಿಲ್ಲಾಧಿಕಾರಿಯವರಿಗೆ ಗುಡ್ಡದ ಪರಿಶೀಲನೆ ನಡೆಸಿದ ಬಳಿಕ ಇದೆಲ್ಲ ಅಂಶಗಳನ್ನೊಳಗೊಂಡ ಸಂಪೂರ್ಣ ವರದಿಯನ್ನೇ ನಾವು ನೀಡಿದ್ದೇವೆ. ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮಳೆ ಜೋರಾದ್ರೆ ತುರ್ತು ಪರಿಸ್ಥಿತಿ ಎದುರಾದ್ರೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡುವಂತೆ ಡಿಸಿಯವರಿಗೆ ಮನವಿ ಮಾಡುತ್ತೇವೆ. ಮುಂದಿನ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ ಎಂದು ನಾಗರಾಜ್ ತಿಳಿಸಿದರು.