ನ್ಯೂಸ್ ನಾಟೌಟ್: ಶಿವಮೊಗ್ಗದಲ್ಲಿ ಹರ್ಷ, ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್ ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ಬಳಿಕ ಬಹುತೇಕ ಹಿಂದೂಗಳಿಗೆ ಬಿಜೆಪಿ ಮೇಲಿನ ನಂಬಿಕೆಯೇ ಕಳೆದು ಹೋಗಿದೆ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದರೂ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ. ಕೊನೆ ಪಕ್ಷ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ದಿಟ್ಟತನವನ್ನೂ ಈ ಸರಕಾರ ತೆಗೆದುಕೊಂಡಿಲ್ಲ ಎನ್ನುವ ಅಸಮಾಧಾನ ಭುಗಿಲೆದ್ದಿದೆ.
ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳು ಜೈಲಿನಲ್ಲಿ ಬಿರಿಯಾನಿ ತಿಂದುಂಡುಕೊಂಡು, ವಿಡಿಯೋ ಕಾಲ್ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ. ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯವೇ ಸಿಗುತ್ತಿದೆ. ಇದನ್ನೆಲ್ಲ ಬಿಜೆಪಿ ಸರಕಾರ ನೋಡಿಕೊಂಡು ಸುಮ್ಮನೆ ಕುಳಿತಿದೆ. ಇದು ಕಾರ್ಯಕರ್ತರ ರಕ್ತವನ್ನು ಮತ್ತಷ್ಟು ಕೊತಕೊತ ಕುದಿಯುವಂತೆ ಮಾಡಿದೆ. ಹಿಂದುತ್ವದ ಹೆಸರಿನಲ್ಲಿ ವೋಟು ಪಡೆಯುತ್ತಿರುವ ಬಿಜೆಪಿ ಮೇಲೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಈಗ ರೋಷ ಉಕ್ಕುತ್ತಿದೆ.
ಈಗಾಗಲೇ ಕೆಲವರು ಬಿಜೆಪಿ ವಿರುದ್ಧವಾಗಿ ಹಿಂದೂಗಳಿಗಾಗಿಯೇ ಇರುವ ಹಿಂದೂ ಪಕ್ಷವನ್ನು ಸ್ಥಾಪಿಸುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಒಂದಷ್ಟು ಮಂದಿ ಬೆಂಬಲ ನೀಡಿದ್ದಾರೆ. ಈ ಪಕ್ಷ ನಿರೀಕ್ಷೆ ಮೂಡಿಸಿದರೂ ರಾಜ್ಯದಲ್ಲಿ ಒಂದಷ್ಟು ಮತವನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ.
ಹಿಂದೂಗಳ ಪ್ರತ್ಯೇಕ ಪಕ್ಷದಿಂದ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗಲಾರದು. ಈ ಪಕ್ಷದಿಂದ ಬಿಜೆಪಿಗೆ ಸಿಗುವ ವೋಟುಗಳು ಡೈವರ್ಟ್ ಆಗಬಹುದು. ಇದರಿಂದ ಬಿಜೆಪಿಗೆ ಅಧಿಕಾರ ಹಿಡಿಯಲು ಕಷ್ಟವಾಗಬಹುದು. ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಪ್ರತ್ಯೇಕ ಹಿಂದೂ ಪಕ್ಷ ಹಾಗೂ ಬಿಜೆಪಿ ನಡುವಿನ ತಿಕ್ಕಾಟದಿಂದ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರುವುದಕ್ಕೆ ಲಾಭವಾಗುತ್ತದೆ.
ಪ್ರವೀಣ್ ಹತ್ಯೆಯ ನಂತರ ಕರಾವಳಿಯ ಬಿಜೆಪಿಯಲ್ಲಿ ದೊಡ್ಡ ಸಂಚಲನವಾಗಿದೆ. ಪ್ರತಿ ಕಾರ್ಯಕರ್ತನೂ ತನ್ನದೇ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾನೆ. ಮೊನ್ನೆ ಮೊನ್ನೆಯಷ್ಟೇ ಪ್ರವೀಣ್ ಪಾರ್ಥೀವ ಶರೀರದ ಮೆರವಣಿಗೆ ವೇಳೆ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ಹಾಕಿದ್ದರು. ಕಾರನ್ನು ಎತ್ತಿ ಕುಲುಕಿ ತಮ್ಮ ಆಕ್ರೋಶ ಹೊರಹಾಕಿದ್ದರು. ಮಾತ್ರವಲ್ಲ ಸಚಿವರಾದ ಅಂಗಾರ ಹಾಗೂ ಸುನೀಲ್ ಕುಮಾರ್ ಗೆ ದಿಗ್ಬಂಧನ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು. ಅಂದು ಕಾರ್ಯಕರ್ತ ಅಷ್ಟರ ಮಟ್ಟಿಗೆ ಕೆರಳಿದ್ದ. ಇಂದು ಅದೇ ಕಾರ್ಯಕರ್ತ ತಮ್ಮದೇ ಆದ ಹಿಂದೂ ಪಕ್ಷ ಬೇಕು ಎನ್ನುತ್ತಿದ್ದಾನೆ. ಈ ನಿರ್ಧಾರ ಸರಿ ಅಥವಾ ತಪ್ಪು ಅನ್ನುವುದನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ನೀವು ತಿಳಿಸಬಹುದು.