ನ್ಯೂಸ್ ನಾಟೌಟ್: ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಮನೆಗಳಿಲ್ಲ. ಆದರೆ ಇಲ್ಲಿ ಹಿಂದೂಗಳೇ ಮೊಹರಂ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಮಾತ್ರವಲ್ಲ ಸರ್ವಧರ್ಮದ ಸಾಮರಸ್ಯಕ್ಕೆ ಈ ಊರು ಸಾಕ್ಷಿಯಾಗಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಗ್ರಾಮ ಹರ್ಲಾಪುರ ಗ್ರಾಮವೇ ಇದೀಗ ವಿಶೇಷಕ್ಕೆ ಕಾರಣವಾಗಿರುವ ಊರು. ಒಟ್ಟು ೩೫೦೦ ಜನಸಂಖ್ಯೆ ಇರುವ ಈ ಪುಟ್ಟ ಊರಿನಲ್ಲಿ ಧರ್ಮದ ಹೆಸರಿನಲ್ಲಿ ಯಾವುದೇ ಸಂಘರ್ಷಗಳಿಲ್ಲ. ಇಲ್ಲಿ ಹಲವು ವರ್ಷಗಳಿಂದಲೇ ಹಿಂದೂಗಳೇ ಮೊಹರಂ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಮುಸ್ಲಿಂಮರಿಗೆಲ್ಲ ಪಕೀರ ಹಿಂದೂಗಳಿಗೆ ಈಶ್ವರ ಇಲ್ಲಿನ ಪಕೀರ ಸ್ವಾಮಿಯಾಗಿದ್ದು ತುಂಬಾ ವರ್ಷಗಳಿಂದ ಇಲ್ಲಿನ ಆಚರಣೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಇಷ್ಟೇ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ ಅನ್ನುವ ಇತಿಹಾಸ ಬಗ್ಗೆ ಯಾವುದೇ ಮಾಹಿತಿ ಇಲ್ಲ ಅನ್ನುತ್ತಿದ್ದಾರೆ ಈ ಊರಿನವರು.