ನ್ಯೂಸ್ ನಾಟೌಟ್ : ಮಳೆ ಅಬ್ಬರಿಸುತ್ತಲೇ ದಕ್ಷಿಣ ಕನ್ನಡ -ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಇಂದೆಂದೂ ಕಾಣದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ದೇವರಕೊಲ್ಲಿ , ಕೊಯನಾಡಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಕುಸಿತದ ಭೀತಿ ಎದುರಾಗಿದೆ. ಈ ಭಾಗದಲ್ಲಿ ಘನ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲಾಡಳಿತ ಸಂಪೂರ್ಣವಾಗಿ ತಡೆ ಹಿಡಿದಿದೆ.
ಈ ಹಿನ್ನೆಲೆಯಲ್ಲಿ ಸಂಪಾಜೆ ಗೇಟ್ ನಲ್ಲಿ ಕಿ.ಮೀ ಗಟ್ಟಲೆ ಲಾರಿಗಳು ನಿಂತಿವೆ. ತಡರಾತ್ರಿಯಿಂದಲೇ ವಾಹನಗಳನ್ನು ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಕೊಡಗಿನ ಕೊಯನಾಡಿನ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದ ಬಳಿಯ ಸೇತುವೆಯ ಸಮೀಪ ರಸ್ತೆ ಕುಸಿಯುತ್ತಿದೆ. ದೊಡ್ಡ ರಂದ್ರವೊಂದು ಬಾಯ್ತೆರೆದಿದ್ದು ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಅಳವಡಿಸಿದ ಡಾಮರು ಸ್ವಲ್ಪ ಸ್ವಲ್ಪವೇ ಜರಿದು ಪಯಸ್ವಿನಿ ನದಿಯನ್ನು ಸೇರುತ್ತಿದೆ. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಘನ ವಾಹನ ಸಂಚರಿಸಿದಲ್ಲಿ ಇದು ಕುಸಿಯುವ ಭೀತಿ ದಟ್ಟವಾಗಿದೆ. ಉಳಿದಂತೆ ಕೊಯನಾಡಿನ ಡಿಪೋ ಹಾಗೂ ದೇವರಕೊಲ್ಲಿ ಬಳಿ ರಸ್ತೆಗಳು ಬಿರುಕು ಬಿಟ್ಟುಕೊಂಡಿವೆ. ಹೀಗಾಗಿ ಈ ಭಾಗದ ರಸ್ತೆಗಳಲ್ಲಿ ದೈತ್ಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ.