ನ್ಯೂಸ್ ನಾಟೌಟ್ : ಕರಾವಳಿಯ ರಕ್ತ ಸಿಕ್ತ ಅಧ್ಯಾಯವನ್ನು ನೋಡಿದ ಜನರು ಇನ್ನೂ ಶಾಕ್ ನಿಂದ ಹೊರಬಂದಿಲ್ಲ. ಹತ್ತು ದಿನಗಳಲ್ಲಿ ಮೂರು ಹತ್ಯೆ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣಕ್ಕೆ ಕಾರಣವಾಗಿತ್ತು. ಈಗಲೂ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.
ಮೊದಲು ಮಸೂದ್ ನಂತರ ಬೆಳ್ಳಾರೆಯ ಪ್ರವೀಣ್ ಬಳಿಕ ಫಾಸಿಲ್ ಹತ್ಯೆ ಮತೀಯ ಸಂಘರ್ಷಕ್ಕೆ ಉಂಟಾಗಿದ್ದು ಅನ್ನುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಇದೀಗ ಫಾಸಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನುಅರೆಸ್ಟ್ ಮಾಡಲಾಗಿದೆ. ಇವರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ .ಶಶಿ ಕುಮಾರ್ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಕೊಲೆಗೈಯಲಾಗಿದೆ ಎನ್ನುವುದು ತಿಳಿದು ಬಂದಿದೆ.
ಹಂತಕರು ಜುಲೈ ೨೬ಕ್ಕೆ ಸಂಜೆಯಿಂದ ಯಾರನ್ನಾದರೂ ಹೊಡಿಬೇಕು ಅನ್ನುವ ಪ್ಲಾನ್ ಮಾಡಿದ್ದಾರೆ. ಅದರಂತೆ ಲಾಂಗ್, ಮಚ್ಚು ಹಾಗೂ ಪರಾರಿಯಾಗಲು ಕಾರನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಿಗದಿಯಂತೆ ಅವರು ಸುರತ್ಕಲ್ ನಲ್ಲಿ ಫಾಸಿಲ್ ಮೇಲೆ ಸಂಜೆಯ ವೇಳೆ ದಾಳಿ ನಡೆಸಿ ಮಚ್ಚು , ಲಾಂಗ್ ಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.