ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತಂಡ ಇದೀಗ (ಆ.೧ಕ್ಕೆಸೋಮವಾರ ಸಂಜೆ) ಬೆಳ್ಳಾರೆಯ ಜಂಕ್ಷನ್ ಗೆ ಬಂದು ತನಿಖೆ ಆರಂಭಿಸಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಎನ್ ಐಎ ತಂಡ ಬೆಳ್ಳಾರೆಗೆ ಬರುವುದರ ಕುರಿತು ಮಾತನಾಡಿದ್ದರು. ಈ ಬೆನ್ನಲ್ಲೇ ಎನ್ ಐ ಎ ತಂಡ ಬೆಳ್ಳಾರೆಗೆ ಬಂದು ತನಿಖೆ ಆರಂಭಿಸುತ್ತಿದೆ.
ಮೊದಲು ಪೊಲೀಸ್ ಠಾಣೆಗೆ ಬಂದ ಎನ್ ಐಎ ಅಧಿಕಾರಿಗಳು ಪೊಲೀಸರು ನೀಡಿದ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಂದ ನೇರವಾಗಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಒಂದು ಕಡೆ ಪೊಲೀಸರ ಆರು ತನಿಖಾ ತಂಡ ಹಂತಕರ ಜಾಡನ್ನು ಹಿಡಿದು ಹೊರಟಿದೆ. ಈ ತನಿಖೆ ಪ್ರಗತಿಯಲ್ಲಿದೆ. ಆದರೆ ಎನ್ಐಎ ತಂಡವು ಪ್ರಕರಣವನ್ನು ವಹಿಸಿಕೊಂಡ ಕೇವಲ ಎರಡೇ ದಿನಗಳಲ್ಲಿ ತನಿಖೆ ಆರಂಭಿಸಿದೆ. ವಿಶೇಷವೆಂದರೆ ಪ್ರವೀಣ್ ಹತ್ಯೆಯಾದ ಅಕ್ಷಯ್ ಚಿಕನ್ ಸೆಂಟರ್ ಸುತ್ತಮುತ್ತಲಿನ ಪ್ರದೇಶವನ್ನು ಎನ್ ಐ ಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೊಲೆ ನಡೆದ ಜಾಗದ ಸಮೀಪ ಇರುವ ಮಸೀದಿಗೂ ಎನ್ ಐಎ ತಂಡ ಭೇಟಿ ನೀಡಿ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.