ನ್ಯೂಸ್ ನಾಟೌಟ್: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ರಾಜ್ಯಾದಾದ್ಯಂತ ಭಾರಿ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಹಂತಕರು ಯಾರಿರಬಹುದು? ಅನ್ನುವ ನಿಟ್ಟಿನಲ್ಲಿ ಪೊಲೀಸ್ ತನಿಖೆಯೂ ಪ್ರಗತಿಯಲ್ಲಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ಬೆನ್ನಲ್ಲೇ ಬೆಳ್ಳಾರೆ ವ್ಯಕ್ತಿಯೊಬ್ಬ ಪ್ರವೀಣ್ ಹತ್ಯೆಗೂ ಮೊದಲು ಅಂದರೆ ಮಂಗಳವಾರ ಮಧ್ಯಾಹ್ನದಿಂದ ಬೆಳ್ಳಾರೆಯಿಂದ ನಾಪತ್ತೆಯಾಗಿರುವ ಬಗ್ಗೆ ಗುಸುಗುಸು ಕೇಳಿ ಬರುತ್ತಿದೆ. ಈ ವ್ಯಕ್ತಿ ಯಾರು? ಏನು? ಅನ್ನುವುದರ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈತನಿಗೆ ಪ್ರವೀಣ್ ನೆಟ್ಟಾರು ಕೊಲೆಯಾಗುವುದರ ಕುರಿತು ಮೊದಲೇ ಮಾಹಿತಿ ಇತ್ತೆ? ಅಥವಾ ಆತ ಬೇರೆ ಕೆಲಸದ ಮೇಲೆ ಊರು ಬಿಟ್ಟಿದ್ದನೇ? ಎನ್ನುವ ಕುರಿತು ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಆರೋಪಿಗಳನ್ನು ಹಿಡಿಯುವುದಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲ ಪ್ರಯತ್ನಗಳು ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಎಲ್ಲಾ ಕಡೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಹಂತಕರು ಕೇರಳದಿಂದ ಬಂದವರು ಅನ್ನುವ ಮಾಹಿತಿ ಇದೆ. ಅವರನ್ನು ಇಲ್ಲಿಗೆ ಕರೆಯಿಸಿಕೊಂಡು ಕೊಲೆ ನಡೆಸಲಾಗಿದೆ ಅನ್ನುವಂತಹ ಮಾತುಗಳೂ ಕೇಳಿ ಬರುತ್ತಿದೆ. ಮಸೂದ್ ಹತ್ಯೆಗೆ ಪ್ರತೀಕಾರ ಇರಲೂಬಹುದು ಎನ್ನಲಾಗುತ್ತಿದೆ. ಏನೇ ಇದ್ದರೂ ತನಿಖೆಯಿಂದಷ್ಟೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.