ನ್ಯೂಸ್ ನಾಟೌಟ್: ಕನ್ನಡ, ತೆಲುಗು, ತಮಿಳು ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ 1990ರ ದಶಕದಲ್ಲಿ ಅತ್ಯಂತ ಬೇಡಿಕೆಯನ್ನು ಹೊಂದಿದ್ದ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ನಟಿ ಸಾವನ್ನಪ್ಪಿ ಇಂದಿಗೆ 21 ವರ್ಷ ಪೂರ್ಣಗೊಂಡಿದೆ. ಆದರೆ, ಇದೀಗ ನಟಿ ಸೌಂದರ್ಯ ಅವರದ್ದು ಆಕಸ್ಮಿಕ ಅಪಘಾತದ ಸಾವಲ್ಲ. ನಟ ಮೋಹನ್ ಬಾಬು ಅವರು ಯೋಜನಾಬದ್ಧವಾಗಿ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಚಿಟ್ಟಿಮಲ್ಲು ಎನ್ನುವವರು ದೂರು ನೀಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಹಿಂದಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ ತಮ್ಮ 31 ನೇ ವಯಸ್ಸಿನಲ್ಲಿ ಖಾಸಗಿ ವಿಮಾನದಲ್ಲಿ ಹೋಗುವಾಗ 2004ರ ಏ.17ರಂದು ನಡೆದ ಅಪಘಾತದಲ್ಲಿ ದುರಂತ ಸಾವಿಗೀಡಾದ್ದರು. ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷದ ರಾಜಕೀಯ ಪ್ರಚಾರ ಕಾರ್ಯಕ್ರಮಕ್ಕೆ ಕರೀಂನಗರದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ದುರಂತದಲ್ಲಿ ಅವರ ಸಹೋದರನೂ ಸಾವನ್ನಪ್ಪಿದ್ದು, ಇಬ್ಬರೂ ಸುಟ್ಟು ಕರಕಲಾಗಿದ್ದರು. ಇಬ್ಬರ ಮೃತ ದೇಹವನ್ನೂ ಪಡೆಯಲು ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ನಟಿ ಸೌಂದರ್ಯ ಅವರದ್ದು ಆಕಸ್ಮಿಕ ಅಪಘಾತದ ಸಾವಲ್ಲ, ನಟ ಮೋಹನ್ ಬಾಬು ಸಂಜು ರೂಪಿಸಿ ಮಾಡಿದ ಕೊಲೆ ಎಂದು ದೂರುದಾರ ಚಿಟ್ಟಿಮಲ್ಲು ಎನ್ನುವವರು ತೆಲಂಗಾಣದ ಖಮ್ಮಂ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ನಟಿ ಸೌಂದರ್ಯ ಕುಟುಂಬದವರು ಶಂಷಾಬಾದ್ ನ ಜಲಪಲ್ಲಿ ಗ್ರಾಮದಲ್ಲಿ 6 ಎಕರೆ ಭೂಮಿ ಹೊಂದಿದ್ದು, ಅದನ್ನು ತನಗೆ ಮಾರಾಟ ಮಾಡುವಂತೆ ನಟ ಮೋಹನ್ ಬಾಬು ಕೇಳಿದ್ದರು. ಆದರೆ, ಇದಕ್ಕೆ ನಟಿ ಸೌಂದರ್ಯ ಹಾಗೂ ಅವರ ಸಹೋದರ ಅಮರನಾಥ್ ನಿರಾಕರಿಸಿದ್ದರು. ಅವರ ನಡುವೆ ಜಮೀನಿನ ವಿಚಾರವಾಗಿ ಬಿರುಕು ಮೂಡಿದ ಬಳಿಕವೇ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ನಟ ಮೋಹನ್ ಬಾಬು ಸೌಂದರ್ಯ ಅವರ 6 ಎಕರೆ ಜಮೀನನ್ನು ಲಪಟಾಯಿಸಿ ದೊಡ್ಡ ಆದಾಯದ ಮೂಲವಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.