ಮಡಿಕೇರಿ: ಕರೋನಾ ವಿರುದ್ಧ ಹೋರಾಟ ನಡೆಸುವ ಸಿಬ್ಬಂದಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೋನಾ ವಾರಿಯರ್ಸ್ ಅಂತ ಕರೆದ್ರು, ಇಡೀ ದೇಶವೇ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಸಿಬ್ಬಂದಿಗೆ ಬಿಗ್ ಸೆಲ್ಯೂಟ್ ಮಾಡಿತ್ತು. ಆದರೆ ಇದೀಗ ಸರಕಾರವೇ ಒಟ್ಟು 16 ಮಂದಿ ಕೊರೊನಾ ವಾರಿಯರ್ಸ್ ಅನ್ನು ಒಪ್ಪಂದ ಅವಧಿ ಮುಗಿಯುವ ಮೊದಲೇ ಕೆಲಸದಿಂದ ಕಿತ್ತು ಹಾಕಿ ಅವಮಾನ ಮಾಡಿದ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.
ಏನಿದು ಪ್ರಕರಣ?
ಕರೋನಾ ಹೆಚ್ಚುತ್ತಿರುವುದರಿಂದ ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳಿಗೆ ಸರಕಾರ ಗುತ್ತಿಗೆ ಆಧಾರದಲ್ಲಿ ಆರು ತಿಂಗಳ ಅವಧಿಗೆ ತಾತ್ಕಾಲಿಕ ನೇಮಕಾತಿ ಮಾಡಿತ್ತು. ಅಂತೆಯೇ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಆಸ್ಪತ್ರೆಯ ವಿವಿಧ ವಿಭಾಗಕ್ಕೂ ಒಟ್ಟು 16 ಮಂದಿ ಸಿಬ್ಬಂದಿ ನೇಮಕಾತಿ ಮಾಡಲಾಗಿತ್ತು. ಎರಡು ತಿಂಗಳ ಹಿಂದೆಯಷ್ಟೇ ಆಗಿದ್ದ ನೇಮಕಾತಿಯನ್ನು ಇದೀಗ ಹಠಾತ್ ರದ್ದುಗೊಳಿಸಲಾಗಿದೆ. ಜತೆಗೆ ನೌಕರರಿಗೆ ಎರಡು ತಿಂಗಳ ವೇತನವನ್ನೂ ನೀಡಿಲ್ಲ. ಇದರಿಂದ ಸಿಬ್ಬಂದಿ ತೊಂದರೆಗೆ ಸಿಲುಕಿದ್ದು ಯಾವುದೇ ಮಾಹಿತಿ ನೀಡದೆ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮುನ್ಸೂಚನೆಯೇ ನೀಡಿಲ್ಲ..!
ಕೆಲಸದಿಂದ ಒಬ್ಬ ವ್ಯಕ್ತಿಯನ್ನು ತೆಗೆಯಬೇಕಾದರೆ ಸಾಮಾನ್ಯವಾಗಿ ಒಂದಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸೇವಾ ಅವಧಿ ಒಪ್ಪಂದ ಪ್ರಕಾರ ಮುಗಿದ ಕೂಡಲೇ ಮೊದಲು ವ್ಯಕ್ತಿಗೆ ನೋಟಿಸ್ ನೀಡಬೇಕು. ಅವರಿಗೆ ನೀಡಬೇಕಿರುವ ಫೈನಲ್ ಸೆಟಲ್ ಮೆಂಟ್ ಅನ್ನು ಕಂಪ್ಲೀಟ್ ಮಾಡಬೇಕು. ಹೀಗೆ ಹಲವು ನಿಯಮಗಳಿವೆ. ಆದರೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಇದ್ಯಾವುದು ನಡೆದೇ ಇಲ್ಲ. ಈ ಬಗ್ಗೆ ನೊಂದ ಆಪರೇಷನ್ ಥಿಯೇಟರ್ ತಂತ್ರಜ್ಞ ಸಿಬ್ಬಂದಿಯೊಬ್ಬರು ಹೇಳಿದ್ದು ಹೀಗೆ, ಜಿಲ್ಲಾಧಿಕಾರಿಗಳ ಪ್ರಕಟಣೆಯಂತೆ ನಮ್ಮ ಆಯ್ಕೆ ನಡೆದಿದೆ. ಆರು ತಿಂಗಳ ಅವಧಿಗೆ ಒಪ್ಪಂದವಾಗಿತ್ತು. ತಿಂಗಳಿಗೆ ಇಪ್ಪತ್ತು ಸಾವಿರ ವೇತನ ಫಿಕ್ಸ್ ಆಗಿತ್ತು. ಎರಡು ತಿಂಗಳು ಕೆಲಸ ಮಾಡಿದ್ದೇವೆ. ಇದ್ದಕ್ಕಿದ್ದಂತೆ ನಿಮ್ಮ ಸೇವೆ ಸಾಕು. ಈಗ ಕರೋನಾ ಕಡಿಮೆ ಆಗಿದೆ. ಮುಂದೆ ಹೆಚ್ಚಾದರೆ ಹೇಳುತ್ತೇವೆ. ನಿಮಗೆ ಹಣ ನೀಡಲು ನಮ್ಮ ಬಳಿಯಲ್ಲಿ ಈಗ ಫಂಡ್ ಇಲ್ಲ. ಸರಕಾರ ಅದನ್ನು ನೀಡಿದಾಗ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಇದರಿಂದ ನಾವು ಇಕ್ಕಟ್ಟಿಗೆ ಸಿಲುಕಿದ್ದೇವೆ. ಹಣ ಸಿಗುತ್ತದೆ ಕಷ್ಟಗಳು ಸ್ವಲ್ಪ ಮಟ್ಟಿಗಾದರೂ ಪರಿಹಾರ ಆಗುತ್ತದೆ ಎಂದು ಬಂದಿದ್ದೆವು. ಆದರೆ ಈಗ ಎಲ್ಲವೂ ನುಚ್ಚುನೂರಾಗಿದೆ ಎಂದು ತಿಳಿಸಿದರು.