ನ್ಯೂಸ್ ನಾಟೌಟ್: ಭಾರತ ಕ್ರಿಕೆಟ್ ತಂಡ ಭಾನುವಾರ(ಮಾ.9) ರಾತ್ರಿ ದುಬೈನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮವನ್ನು ಆಚರಿಸಿದ ಯುವಕರ ತಂಡವು ಮದ್ಯಪ್ರವೇಶಿಸಿದ ಪೊಲೀಸರ ಮೇಲೆಯೇ ದಾಳಿ ಮಾಡಿತ್ತು. ಕೆಲವರು ಪೊಲೀಸ್ ವಾಹನಗಳನ್ನು ಬೆನ್ನಟ್ಟಿಕೊಂಡು ಹೋಗಿ ಕಲ್ಲು ತೂರಾಟ ನಡೆಸುತ್ತಿರುವುದೂ ಕಂಡುಬಂದಿದೆ. ಈ ಘಟನೆ ಹಿಂಸಾತ್ಮಕ ರೂಪ ಪಡೆದ ಆರೋಪದಲ್ಲಿ ಇಬ್ಬರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎನ್ ಎಸ್ ಎ ಅಡಿಯಲ್ಲಿ ಆರೋಪಿಗಳನ್ನು 12 ತಿಂಗಳ ವರೆಗೆ ಬಂಧನದಲ್ಲಿಡಲು ಅವಕಾಶವಿದೆ.
ಈ ಆರೋಪಿಗಳ ಯುವಕರ ತಲೆ ಬೋಳಿಸಿ ಅವರನ್ನು ಪೊಲೀಸರು ಮೆರವಣಿಗೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಬೆಂಗಾವಲಿನಲ್ಲಿ ಯುವಕರನ್ನು ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿ ದಾಖಲಾಗಿದೆ. ಈ ವಿವಾದದ ಬೆನ್ನಲ್ಲೇ ಬಿಜೆಪಿ ಶಾಸಕಿ ಗಾಯತ್ರಿ ರಾಜೇ ಪವಾರ್ ದೇವಾಸ್ ಎಸ್ಪಿ ಪುನೀತ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!
“ದೇಶದ ಇತರೆಡೆ ಸಂಭ್ರಮಿಸಿದಂತೆ ಈ ಯುವಕರು ಕೂಡಾ ಭಾರತದ ಗೆಲುವನ್ನು ಸಂಭ್ರಮಿಸಿದ್ದರು. ಇವರು ಅಪರಾಧಿಗಳಲ್ಲ; ಅವರನ್ನು ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವುದು ನ್ಯಾಯಸಮ್ಮತವಲ್ಲ. ಅವರ ಕುಟುಂಬದ ಸದಸ್ಯರು ಎಸ್ಪಿ ಕಚೇರಿಗೆ ನನ್ನ ಜತೆಗೆ ಬಂದಿದ್ದು, ಈ ಅಸಮಂಜಸ ಶಿಕ್ಷೆಯನ್ನು ನಾವು ಬಲವಾಗಿ ಖಂಡಿಸಿದ್ದೇವೆ. ಘಟನೆ ಬಗ್ಗೆ ಸಮಗ್ರ ತನಿಖೆಯ ಭರವಸೆಯನ್ನು ಎಸ್ಪಿ ನೀಡಿದ್ದಾರೆ” ಎಂದು ಶಾಸಕಿ ವಿವರಿಸಿದ್ದಾರೆ. ರವಿವಾರ ರಾತ್ರಿಯ ಸಂಭ್ರಮಾಚರಣೆ ಮತ್ತು ಸೋಮವಾರದ ಘಟನಾವಳಿಗಳ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.