ನ್ಯೂಸ್ ನಾಟೌಟ್: ನಾಸಾ ಬಾಹ್ಯಾಕಾಶ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್)ಕ್ಕೆ ಕೈಗೊಂಡ ಅಲ್ಪಾವಧಿ ಮಿಷನ್ 10 ತಿಂಗಳ ಮ್ಯಾರಥಾನ್ ಆಗಿ ಪರಿಣಮಿಸಿದ್ದು, ಕೊನೆಗೂ ಇಬ್ಬರು ಗಗನಯಾನಿಗಳು ಭೂಮಿಗೆ ಮರಳುವ ಮುಹೂರ್ತ ಫಿಕ್ಸ್ ಆಗಿದೆ. ಸ್ಪೇಸ್ ಎಕ್ಸ್ ನ ಕ್ರೂ10 ಈ ವಾರ ಉಡಾವಣೆಯಾಗಲಿದ್ದು, ಇಬ್ಬರು ಬಾಹ್ಯಾಕಾಶ ಯಾನಿಗಳನ್ನು ಮಾರ್ಚ್ 16ರಂದು ವಾಪಾಸು ಕರೆ ತರುವ ಯೋಜನೆಗೆ ಅಮೆರಿಕದ ಬಾಹ್ಯಾಕಾಶ ಏಜೆನ್ಸಿ ಒಪ್ಪಿಗೆ ನೀಡಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 10 ದಿನಗಳ ಮಿಷನ್ ಅನ್ನು ಬೋಯಿಂಗ್ ಸ್ಟಾರ್ ಲೈನರ್ ಮೂಲಕ 2024ರ ಜೂನ್ 5ರಂದು ಕೈಗೊಂಡಿದ್ದರು. ಆದರೆ ಬಾಹ್ಯಾಕಾಶ ನೌಕೆ ತಲುಪುವ ಮತ್ತು ಡಾಕಿಂಗ್ ರೂಪಾಂತರದ ವೇಳೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಬಗ್ಗೆ ನಾಸಾ ಹಾಗೂ ಬೋಯಿಂಗ್ ವಿಸ್ತೃತವಾದ ಸಂಶೋಧನೆ ಕೈಗೊಂಡು ಅಂತಿಮವಾಗಿ ಸ್ಟಾರ್ ಲೈನರ್ ನಲ್ಲಿ ಭೂಮಿಗೆ ಮರಳುವುದು ತೀರಾ ಅಪಾಯಕಾರಿ ಎಂಬ ನಿರ್ಧಾರಕ್ಕೆ ಬಂದಿತ್ತು.
ಬಾಹ್ಯಾಕಾಶ ನೌಕೆ ಕಳೆದ ಸೆಪ್ಟೆಂಬರ್ ನಲ್ಲಿ ಗಗನಯಾತ್ರಿಗಳಿಲ್ಲದೇ ಭೂಮಿಗೆ ವಾಪಸ್ಸಾಗಿದ್ದು, ಬಾಹ್ಯಾಕಾಶ ಯಾನಿಗಳು ಅಲ್ಲೇ ಉಳಿದುಕೊಳ್ಳಬೇಕಾಯಿತು. ಬಳಿಕ ಎಲಾನ್ ಮಸ್ಕ್ ಸ್ಪೇಸ್ಎಕ್ಸ್ ನೆರವಿನೊಂದಿಗೆ ಉಭಯ ಯಾತ್ರಿಗಳನ್ನು ವಾಪಾಸು ಕರೆತರಲು ನಾಸಾ ನಿರ್ಧರಿಸಿತ್ತು. ಐಎಸ್ಎಸ್ ನಲ್ಲಿ ಅತಂತ್ರವಾಗಿರುವ ಇಬ್ಬರು ಯಾನಿಗಳನ್ನು ಇಬ್ಬರು ಸಿಬ್ಬಂದಿಯೊಂದಿಗೆ ಉಡಾವಣೆಯಾದ ಕ್ರೂ-9 ಮಿಷನ್ ನಲ್ಲಿ ಕರೆತರಲು ನಿರ್ಧರಿಸಲಾಗಿತ್ತು.
ಐಎಸ್ಎಸ್ ನಲ್ಲಿ ಆರು ತಿಂಗಳ ವಾಸ್ತವ್ಯದ ಬಳಿಕ ಫೆಬ್ರವರಿಯಲ್ಲಿ ಕ್ರೂ-9 ಭೂಮಿಗೆ ವಾಪಸ್ಸಾಗಲು ಯೋಜನೆ ರೂಪಿಸಲಾಗಿತ್ತು. ಆದರೆ ಕೆಲ ಹೊಂದಾಣಿಕೆಗಳಿಗಾಗಿ ಇದನ್ನು ಮುಂದೂಡಲಾಗಿತ್ತು. ಇದೀಗ ನಾಸಾ ಕ್ರೂ-10 ಮಿಷನ್ ಉಡಾವಣೆಗೆ ಅನುಮತಿ ನೀಡಿದೆ.
ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 12ರಂದು ಗಗನಯಾತ್ರಿಗಳನ್ನು ಕರೆತರಲು ಬಾಹ್ಯಾಕಾಶ ನೌಕೆ ಉಡಾವಣೆಯಾಗಲಿದ್ದು, ನಾಲ್ವರು ಬಾಹ್ಯಾಕಾಶ ಯಾನಿಗಳನ್ನು ಇದರ ಜೊತೆ ಹೊತ್ತೊಯ್ಯಲಿದೆ. ನಾಸಾ ಪ್ರಕಾರ ಕ್ರೂ-9 ಮಾರ್ಚ್ 16ರಂದು ವಾಪಸ್ಸಾಗಲಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.