ನ್ಯೂಸ್ ನಾಟೌಟ್: “ನಾನು ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಪಡೆಯುತ್ತಿಲ್ಲ” ಎಂದು ಭಾನುವಾರ(ಮಾ.9) ರಾತ್ರಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ಮತ್ತು ನಾಯಕನಾಗಿ ಉತ್ತಮವಾಗಿ ರನ್ ಗಳಿಸಲು ಸಾಧ್ಯವಾಗದಿರುವ ಕಾರಣಕ್ಕೆ ಕೆಲ ಸಮಯದಿಂದ ರೋಹಿತ್ ಶರ್ಮಾ ನಿವೃತ್ತಿ ಹೊಂದಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ 76 ರನ್ ಬಾರಿಸುವ ಮೂಲಕ ತನ್ನಲ್ಲಿ ಇನ್ನೂ ಕ್ರಿಕೆಟ್ ಕೌಶಲ ಉಳಿದಿದೆ ಎಂಬುದನ್ನು ಸಾಬೀತುಪಡಿಸಿದರು.
“ನಾನು ಈ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿಲ್ಲ. ಯಾವುದೇ ರೀತಿಯ ಊಹಾಪೋಹಗಳನ್ನು ಹರಡಬೇಡಿ” ಎಂದು ಶರ್ಮಾ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
Back-to-back ICC event triumphs for Rohit Sharma 👌🏆 pic.twitter.com/LyxxP54Uhr
— ICC (@ICC) March 9, 2025
“ಭವಿಷ್ಯದ ಬಗ್ಗೆ ನನ್ನಲ್ಲಿ ಯಾವುದೇ ಯೋಜನೆಗಳಿಲ್ಲ. ಏನು ಸಂಭವಿಸಬೇಕೋ ಅದು ಸಂಭವಿಸುತ್ತಿರುತ್ತದೆ” (ಜೋ ಹೊ ರಹಾ ಹೇ, ವೊ ಚಲ್ತಾ ಜಾಯೇಗಾ) ಎಂದು ಇದೇ ವೇಳೆ ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 83 ಎಸೆತಗಳನ್ನು ಎದುರಿಸಿ 76 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. “ಕಳೆದ 3-4 ಪಂದ್ಯಗಳಲ್ಲಿ ನಾನು ಯಾವ ರೀತಿಯ ಪ್ರದರ್ಶನ ನೀಡಿದ್ದೇನೋ ಅದನ್ನೇ ಇವತ್ತೂ ಮುಂದುವರೆಸಿದ್ದೇನೆ. ಬ್ಯಾಟಿಂಗ್‌ನಲ್ಲಿ ವಿಭಿನ್ನವಾದುದೇನೂ ಮಾಡಿಲ್ಲ. ಪವರ್ ಪ್ಲೇನಲ್ಲಿ ರನ್ ಸಂಗ್ರಹಿಸುವುದು ಎಷ್ಟು ಮುಖ್ಯ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.” ಎಂದು ವಿವರಿಸಿದರು.