ನ್ಯೂಸ್ ನಾಟೌಟ್: ಬಾಲ್ಯ ವಿವಾಹ ಪದ್ಧತಿ ನಿಷೇಧದಲ್ಲಿದ್ದರೂ ಜನ ಮಾತ್ರ ಮೂಢ ನಂಬಿಕೆಗಳಿಂದ ಇನ್ನೂ ಹೊರ ಬಂದಿಲ್ಲ ಅನ್ನೋದಕ್ಕೆ ಈ ಘಟನೆಯೇ ಅದಕ್ಕೆ ಪ್ರಮುಖ ಸಾಕ್ಷಿ.ಇನ್ನೂ ಓದಿ ಸಮಾಜದಲ್ಲಿ ಏನಾದರೂ ಸಾಧಿಸಿ ತಾನೊಬ್ಬ ಸಾದಕ ಮಹಿಳೆಯಾಗಬೇಕೆನ್ನುವ ಬಾಲಕಿಯ ಕನಸು ನುಚ್ಚು ನೂರಾಗಿದೆ.ಬೇಡ ಎಂದರೂ , ಕಾಡಿದರೂ ಬೇಡಿದರೂ ಕುಟುಂಬಸ್ಥರು ಈಕೆಯ ಅಳಲಿಗೆ ಕಿಂಚಿತ್ತೂ ಬೆಲೆ ಕೊಡದೇ ಕೊನೆಗೂ ಮದುವೆಯನ್ನು ಮಾಡಿಯೇ ಬಿಟ್ಟಿದ್ದಾರೆ. ಇಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿರೋದು ತಮಿಳುನಾಡಿನಲ್ಲಿ.
7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ (Child Marriage) ಮಾಡಿಸಿದ್ದಲ್ಲದೇ ಬಾಲಕಿ ಬರಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಮದುವೆ ಮಾಡಿಸಿದ್ದಾರೆ. ತಮಿಳುನಾಡಿನ (Tamil Nadu) ಅಂಚೆಟ್ಟಿ (Anchetty) ಗ್ರಾಮದಲ್ಲಿ ಈ ಘಟನೆ ನಡೆದಿದೆ.ರಾಜ್ಯದ ಗಡಿಭಾಗವಾದ ಅಂಚೆಟ್ಟಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಬಾಲಕಿ ಅಳುತ್ತಾ ಕಿರುಚಾಡಿದರೂ ಸಹ ಬಿಡದೇ ಎಳೆದೊಯ್ದು ಮೃಗಗಳ ರೀತಿ ವರ್ತಿಸಿದ್ದಾರೆ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಸಹ ಆಕೆಯ ಪೋಷಕರು ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಾಲಕಿಯ ತಾಯಿಯ ಸ್ವಂತ ತಮ್ಮನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿ ಅಂಚೆಟ್ಟಿಯ ಮನೆಗೆ ಬಂದಿದ್ದಾರೆ,
ಇದಾದ ಬಳಿಕ ಅಲ್ಲಿಂದ ಆಕೆಯನ್ನು ಯುವಕನ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಬಾಲಕಿ ಬರಲು ಒಪ್ಪದಿದ್ದಾಗ ಆಕೆಯನ್ನು ಭುಜದ ಮೇಲೆ ಹಾಕಿಕೊಂಡು ಬಲವಂತವಾಗಿ ಕರೆದೊಯ್ದಿದ್ದಾರೆ.ದಾರಿಯುದ್ದಕ್ಕೂ ಬಾಲಕಿ ಕಿರುಚಾಡಿದರೂ ಕೂಡ ಪಾಪಿಗಳ ಮನಸ್ಸು ಕರಗದೇ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇನ್ನು ಘಟನೆ ಸಂಬಂಧ ಡೆಂಕಣಿಕೋಟೆ ಮಹಿಳಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೋಕ್ಸೋ ಕೇಸ್ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹವಾಗಿದ್ದ ಮಾದೇಶ್, ಆತನ ಅಣ್ಣ ಮಲ್ಲೇಶ್, ಪತ್ನಿ ಮುನಿಯಮ್ನಲ್, ಬಾಲಕಿ ತಾಯಿ ನಾಗಮ್ಮ, ಸಂಬಂಧಿ ಮುನಿಯಪ್ಪನ್ ಎಂಬವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.