ನ್ಯೂಸ್ ನಾಟೌಟ್: ಒಂದು ಕಡೆ ನಮ್ಮ ಸಚಿವರಾದ ಎಸ್ ಅಂಗಾರ ಅವರು ಸ್ವಾವಲಂಬಿ ಭಾರತಕ್ಕೆ ಸ್ವ ಉದ್ಯೋಗಕ್ಕೆ ಒತ್ತು ನೀಡಿ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಸುಳ್ಯದ ಜನತೆ ಅಡಿಕೆಗೆ ಹಳದಿ ರೋಗ ಅಂಟಿಕೊಂಡು ನಲುಗಿದ್ದಾರೆ. ಇಲ್ಲಿ ಏನಾದರೂ ಬೆಳೆಯೋಣ ಎಂದರೆ ರಬ್ಬರ್ ಬಿಟ್ಟು ಇನ್ನೊಂದು ಕೃಷಿ ಆಗುತ್ತಿಲ್ಲ. ವಿದ್ಯಾವಂತರು ಉದ್ಯೋಗ ಮಾಡೋಣ ಎಂದು ಹೊರಟರೆ ಅದಕ್ಕೆ ದೊಡ್ಡ ಮಟ್ಟದ ಬಜೆಟ್ ಬೇಕು, ಜತೆಗೆ ಸ್ವಂತ ಭೂಮಿ ಇರಬೇಕು. ಅಷ್ಟು ಹಣ ಹಾಕಿ ನಾಳೆ ಲಾಸ್ ಆದರೆ ಎದುರಿಸುತ್ತೇನೆ ಅನ್ನುವ ತಾಕತ್ತು ಎಲ್ಲಕ್ಕಿಂತ ಮೊದಲು ಇರಬೇಕು. ಸುಳ್ಯದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇಂತಹ ಧೈರ್ಯ ಮಾಡಬಹುದು. ಆದರೆ ಉಳಿದಂತೆ ಶೇ.೮೦ರಷ್ಟು ಜನ ಬಹುಪಾಲು ಮಧ್ಯಮ ಬಡ ಕುಟುಂಬದ ಹಿನ್ನೆಲೆಯುಳ್ಳವರೇ ಆಗಿದ್ದಾರೆ. ಹೆಚ್ಚಿನವರಿಗೆ ಒಂದು ಮನೆಯೂ ಇಲ್ಲ..!
ಸುಮಾರು ವರ್ಷಗಳ ಹಿಂದೆ ಸುಳ್ಯ ತಾಲೂಕು ಕೃಷಿಯಲ್ಲಿ ಸಂಪದ್ಭರಿತವಾಗಿತ್ತು. ಗಡಿ ಭಾಗ ಸಂಪಾಜೆಯಿಂದ ಹೊರಟು ಸುಬ್ರಹ್ಮಣ್ಯದ ವರೆಗೆ ಪ್ರತಿ ತೋಟದಲ್ಲೂ ಅಡಿಕೆ ಹಸಿರ ಸಿರಿ ರಾರಾಜಿಸುತ್ತಿತ್ತು. ಇಲ್ಲಿನ ಜನರು ಹೆಚ್ಚಿನವರು ಅಡಿಕೆಯಿಂದಾಗಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದರು. ಪ್ರತಿ ಮನೆಗಳಲ್ಲೂ ಎರಡು ಜೀಪು ಇರುತ್ತಿತ್ತು. ಅಂತಹ ಶ್ರೀಮಂತ ಅಡಿಕೆ ತೋಟದವರು ಕಳೆದ ಕೆಲವು ವರ್ಷಗಳಿಂದ ಹಳದಿ ರೋಗದಿಂದಾಗಿ ಹಂತ-ಹಂತವಾಗಿ ಪಾತಾಳಕ್ಕೆ ಕುಸಿದಿದ್ದಾರೆ. ಕೆಲವರು ಜೀಪು, ಆಸ್ತಿ ಮಾರಿ ೧೦ ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಂಡು ಸುಮ್ಮನಾಗಿದ್ದಾರೆ. ಮತ್ತೆ ಕೆಲವರು ಹಣೆಬರಹವನ್ನು ಶಪಿಸುತ್ತಾ ರಬ್ಬರ್ ಹಾಕಿಕೊಂಡು ಜೀವನ ದೂಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಓದು ಕೊಟ್ಟು ಅವರೊಂದು ಕೆಲಸ ಹಿಡಿದುಕೊಂಡರೆ ಸಾಕು ಹೇಗೋ ನಮ್ಮ ಜೀವನ ಹೋಗುತ್ತದೆ ಎಂದು ಕಾಲ ದೂಡುತ್ತಿರುವ ಕೃಷಿಕರ ಸಂಖ್ಯೆಯೇ ತಾಲೂಕಿನಲ್ಲಿ ಹೆಚ್ಚಿದೆ. ಇನ್ನು ಅವರ ಮಕ್ಕಳು ಓದಿ ದೊಡ್ಡವರಾದ ನಂತರ ಕೆಲಸ ಹುಡುಕಿಕೊಂಡು ಬೆಂಗಳೂರಿನಂತಹ ನಗರ ಸೇರುತ್ತಿದ್ದಾರೆ. ವರ್ಷಕ್ಕೆ ಕನಿಷ್ಟ ಎಂದರೂ ಸುಳ್ಯ ತಾಲೂಕಿನ ಸಾವಿರಾರು ಮಕ್ಕಳು ನಗರ ಸೇರುತ್ತಿದ್ದಾರೆ. ಅಂತಹ ವಿದ್ಯಾವಂತ ಯುವಕರಿಗೆ ಸುಳ್ಯದಲ್ಲಿಯೇ ಕೆಲಸಕೊಟ್ಟು ಅವರನ್ನು ಇಲ್ಲಿಯೇ ಉಳಿಸಿಕೊಂಡು ಸುಳ್ಯದ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿಲ್ಲವೇ?
ತಾಲೂಕಿನ ಜನರಿಗೆ ಸ್ವ ಉದ್ಯೋಗ ಮಾಡುವುದಕ್ಕೆ ಉತ್ಸಾಹದ ಕೊರತೆಯಿಲ್ಲ. ಅವರ ಎದುರಿಗೆ ಇರುವುದು ಮೂಲಸೌಕರ್ಯದ ಕೊರತೆ. ಅದನ್ನು ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಏನಾದರೂ ಕೆಲಸ ಮಾಡಬಹುದೇ? ನಮ್ಮ ವಿದ್ಯಾವಂತ ಯುವಕರು ಹರಿಯುವ ನದಿ ನೀರಿನಂತೆ ವೇಗವಾಗಿ ನಗರವನ್ನು ಸೇರುತ್ತಿದ್ದಾರೆ. ಅಂತಹ ಯುವಕರಿಗಾಗಿ ಸ್ಥಳೀಯ ಮಟ್ಟದಲ್ಲಿ ಬೃಹತ್ ಉದ್ಯೋಗ ಎಂಬ ಅಣೆಕಟ್ಟನ್ನು ನಿರ್ಮಿಸಿದರೆ ಮಾದರಿ ಕೆಲಸವಾಗಲಿದೆ. ಇದಕ್ಕಾಗಿ ನಮ್ಮ ತಾಲೂಕಿನಲ್ಲಿಯೂ ಒಂದಷ್ಟು ಒಳ್ಳೆಯ ಬ್ರ್ಯಾಂಡೆಡ್ ಕಾರ್ಖಾನೆಗಳ ಆರಂಭಕ್ಕೆ ಚಾಲನೆ ನೀಡಬೇಕು. ಸುಳ್ಯದಲ್ಲಿ ಹಣದ ಹರಿವು ಹೆಚ್ಚಾಗುವಂತೆ ನೋಡಿಕೊಂಡರೆ ತನ್ನಿಂದ ತಾನೇ ಉದ್ಯೋಗದ ಸೃಷ್ಟಿಯಾಗುತ್ತದೆ. ಹಾಲಿ ಸಚಿವ ಹಾಗೂ ಸುಳ್ಯದ ಶಾಸಕ ಎಸ್ ಅಂಗಾರ ಅವರು ತಮ್ಮ ಸುವರ್ಣ ಅಧಿಕಾರಾವಧಿಯಲ್ಲಿ ಈ ಕೆಲಸ ಮಾಡಿದರೆ ಪ್ರತಿ ವಿದ್ಯಾವಂತ ಯುವಕ-ಯುವತಿಯರ ಪಾಲಿನ ದೇವರಾಗುತ್ತಾರೆ. ಸುಳ್ಯದಲ್ಲಿ ಅವರಿಂದಲೇ ಇಂತಹದ್ದೊಂದು ಕ್ರಾಂತಿ ಆಗಲಿ ಎಂದು ಹಾರೈಸೋಣ.