ನ್ಯೂಸ್ ನಾಟೌಟ್: ಗೋವಿನ ಬಗ್ಗೆ ವಿಶೇಷ ಕಾಳಜಿ, ಅವುಗಳ ಉತ್ಪನ್ನಗಳಿಂದಲೇ ಹಲವಾರು ಉದ್ಯಮಗಳು ಹುಟ್ಟಿದ ನೆಲಗಳ ಪೈಕಿ ನಮ್ಮ ಸುಳ್ಯವೂ ಒಂದಾಗಿದೆ. ತುಳುವರು, ಅರೆಭಾಷಿಗರ ದೈನಂದಿನ ಬದುಕಿನಲ್ಲಿ ಗೋಮಾತೆಯನ್ನೇ ದೇವರೆಂದು ನಂಬಿಕೊಂಡು ಬರಲಾಗುತ್ತಿದೆ. ಅಂತಹ ಪುಣ್ಯ ನೆಲದಲ್ಲಿ ತಾಲೂಕಿನ ಜನರು ದೊಡ್ಡ ಸಂಕಲ್ಪವನ್ನು ಮಾಡುವ ಕ್ಷಣಗಳು ಈಗ ಸನ್ನಿಹಿತವಾಗುತ್ತಿದೆ.
ಹೌದು, ಗೋವಿನ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ನಂದಿ ರಥಯಾತ್ರೆಯನ್ನು ಸ್ವಾಗತಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ. ಮಾರ್ಚ್ 15ರಂದು ರಥಯಾತ್ರೆ ಸುಳ್ಯಕ್ಕೆ ಪುರಪ್ರವೇಶ ಮಾಡಲಿದೆ. ನಮ್ಮ ಸುಳ್ಯದ ಜನರು ಅದ್ದೂರಿಯಾಗಿ ಸ್ವಾಗತಿಸಲು ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷಯ್ ಕೆ.ಸಿ ಅವರು, “ಗೋವಿನ ಉತ್ಪನ್ನಗಳನ್ನು ನಾವೆಲ್ಲರೂ ಅವಲಂಭಿಸಿದ್ದೇವೆ. ಅದರ ಉತ್ಪನ್ನದ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯುತ್ತಿದೆ. ಗೋ ಸೇವಾ ಗತಿನಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದೊಂದಿಗೆ ರಥಯಾತ್ರೆ ನಡೆಯಲಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಿ” ಎಂದು ತಿಳಿಸಿದರು.
ಮಾ.15ರಂದು ಈ ರಥವು ಸುಬ್ರಹ್ಮಣ್ಯದಿಂದ ಸುಳ್ಯದ ಕಡೆಗೆ ಆಗಮಿಸಲಿದೆ. ಮಧ್ಯಾಹ್ನ ಎಲಿಮಲೆಗೆ ತಲುಪಲಿದೆ. ವಿಶ್ರಾಂತಿಯ ಬಳಿಕ ಮಧ್ಯಾಹ್ನ 3.30ಕ್ಕೆ ಸುಳ್ಯಕ್ಕೆ ಆಗಮಿಸಲಿದೆ. ಜ್ಯೋತಿ ಸರ್ಕಲ್ ನಲ್ಲಿ ಸಾವಿರಾರು ಜನರು ಸೇರಿ ನಂದಿ ರಥಯಾತ್ರೆಯನ್ನು ಸ್ವಾಗತಿಸಲಿದ್ದಾರೆ. ನಂತರ ನಂದಿರಥಯಾತ್ರೆ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ.
ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷನ್ ದಾಸ್ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಂದಿಯ ಮಹತ್ವದ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಸಂಚಾಲಕ ರಾಜೇಶ್ ಮೇನಾಲ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ.ಪಿ., ವಿಕ್ರಮ್ ಅಡ್ಪಂಗಾಯ, ಸಂಚಾಲಕ ಅವಿನಾಶ್ ಡಿ.ಕೆ., ಉಪಾಧ್ಯಕ್ಷರುಗಳಾದ ದೇವರಾಜ್ ಆಳ್ವ, ಎ.ಟಿ.ಕುಸುಮಾಧರ್, ರಜತ್ ಅಡ್ಕಾರು, ಬುದ್ದ ನಾಯ್ಕ್, ರಮೇಶ್ ಇರಂತಮಜಲು, ತೀರ್ಥೇಶ್ ಪಾರೆಪ್ಪಾಡಿ ಉಪಸ್ಥಿತರಿದ್ದರು.