ನ್ಯೂಸ್ ನಾಟೌಟ್: ತೀವ್ರ ಟೀಕೆಗೆ ಗುರಿಯಾಗುತ್ತಿರುವ ಖ್ಯಾತ ಚಲನಚಿತ್ರ ನಟಿ, ಕೊಡಗು ಮೂಲದ ರಶ್ಮಿಕಾ ಮಂದಣ್ಣಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.
ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ಬಗ್ಗೆ ಶಾಸಕರು ಸೇರಿದಂತೆ ಹಲವರಿಂದ ಉಂಟಾಗುತ್ತಿರುವ ಟೀಕೆ ಮತ್ತು ಬೆದರಿಕೆಗಳಿಗೆ ಸೂಕ್ತ ಕ್ರಮ ಕೈಗೊಂಡು ನಟಿಗೆ ರಕ್ಷಣೆ ನೀಡುವಂತೆ ಕೇಳಿಕೊಳ್ಳಲಾಗಿದೆ.
‘ರಶ್ಮಿಕಾ ಮಂದಣ್ಣ ಅವರು ಭಾರತೀಯ ಚಲನಚಿತ್ರ ರಂಗಕ್ಕೆ ದೊರೆತ ಅಪೂರ್ವ ಕೊಡುಗೆ ಹಾಗೂ ಶ್ರೇಷ್ಠ ನಟಿ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಯಾರದ್ದೋ ಸೂಚನೆಯಂತೆ ಅಥವಾ ನಿರೀಕ್ಷೆಯಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸಬಾರದು. ಒಂದು ವೇಳೆ ಹೀಗೆ ಮಾಡಿದರೆ ಕೊಡವ ಫೋಬಿಯಾವನ್ನು ಪ್ರತಿಬಿಂಬಿಸುತ್ತದೆ, ಅಲ್ಲದೆ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದಾಗಿ ಗುರಿಪಡಿಸುತ್ತಿದ್ದಾರೆ ಎನ್ನುವ ಅರ್ಥ ಬರುತ್ತದೆ” ಎಂದು ಉಲ್ಲೇಖಿಸಲಾಗಿದೆ.
“ಕಾವೇರಿ ನದಿಯನ್ನೇ ಬಹುವಾಗಿ ನೆಚ್ಚಿಕೊಂಡಿರುವ ಮಂಡ್ಯದ ಜನತೆಯನ್ನು ಪ್ರತಿನಿಧಿಸುವ ಶಾಸಕರು ಕಾವೇರಿ ಮಾತೆಯ ಪ್ರೀತಿಯ ಪುತ್ರಿ ಹಾಗೂ ಈ ಭಾಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ರನ್ನು ಅಗೌರವದಿಂದ ಕಂಡಿರುವುದು ನಿಜಕ್ಕೂ ವಿಪರ್ಯಾಸ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಜನರನ್ನು ರಕ್ಷಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕರ ಅರ್ಥಹೀನ ಟೀಕಾ ಪ್ರಹಾರದ ಕಾರ್ಯವೈಖರಿ ಖಂಡನೀಯ” ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಕೇಂದ್ರ ಗೃಹ ಸಚಿವರು ಹಾಗೂ ರಾಜ್ಯ ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
View this post on Instagram