ನ್ಯೂಸ್ ನಾಟೌಟ್: ಸುಳ್ಯದ ಸ್ನೇಹ ಶಾಲೆ ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಂದು ವಿಚಾರ ಮಕ್ಕಳಿಗೆ ವಿಶೇಷ, ವಿಭಿನ್ನ ಅನುಭವ ನೀಡುತ್ತದೆ. ಇದೀಗ ಸ್ನೇಹ ಶಾಲೆಯಲ್ಲಿ ಗೋವುಗಳ ಕಲರವವೂ ಆರಂಭವಾಗಿದೆ. ಶಾಲೆಯಲ್ಲಿ ಗೋ ಶಾಲೆ ಹೇಗೆ ಆರಂಭವಾಯಿತು ಅನ್ನುವ ರೋಚಕ ವಿಚಾರವನ್ನು ಸಂಸ್ಥೆಯ ನಿರ್ದೇಶಕರಾದ ಡಾ.ಚಂದ್ರಶೇಖರ ದಾಮ್ಲೆಯವರು ತಮ್ಮದೇ ಮಾತುಗಳಲ್ಲಿ ವಿವರಿಸಿದ್ದಾರೆ. ಇದರ ಪೂರ್ಣ ಪಾಠ ಇಲ್ಲಿದೆ ಓದಿ…
ಇದೇನಪ್ಪಾ, ಇಲ್ಲಿ ಶಾಲೆಯಲ್ಲಿ ಹಸು ಸಾಕ್ತಾರಾ? ನಾನು ಹಾಕಿರುವ ಈ ಫೋಟೊ ನೋಡಿ ಹೀಗೊಂದು ಪ್ರಶ್ನೆ ಮೂಡಿದರೆ ಅಚ್ಚರಿ ಇಲ್ಲ. ಆದರೆ ಅದರ ಹಿಂದೆ ಒಂದು ಕಥೆ ಇದೆ. ಎರಡು ವರ್ಷಗಳ ಹಿಂದೆ ಸುಳ್ಯದ ಪಯಸ್ವಿನಿ ನದಿಯಲ್ಲಿ ಭಾರೀ ನೆರೆಬಂದಾಗ ತಟದಲ್ಲಿದ್ದ ತೋಟಗಳ ಒಳಗೆ ಮತ್ತು ಮನೆಯಂಗಳಗಳಿಗೆ ನೀರು ನುಗ್ಗಿತ್ತು. ಅಂತಹ ಒಂದು ಮನೆಯ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದರು. ಅವರ ಅಂಗಳ ಮಾತ್ರವಲ್ಲ, ಮನೆಯೊಳಗೂ ನೀರು ನುಗ್ಗಿತ್ತು. ಆ ದಿನ ನಾವಿಬ್ಬರೂ ಅವರಲ್ಲಿಗೆ ಹೋಗಿ “ನೆರೆ ಇಳಿಯುವ ತನಕ ನಮ್ಮಲ್ಲಿಗೆ ಬಂದು ಇರಿ, ಖಾಲಿ ಮನೆಯೂ ಇದೆ” ಎಂದು ಕೂಡಾ ಹೇಳಿದ್ದೆವು. ಅಷ್ಟರಲ್ಲಿ ಅವರಿಗೆ ಹತ್ತಿರದ ಮನೆಯವರು ಆಶ್ರಯ ನೀಡಿದ್ದರು.
ಈ ವರ್ಷ ಮತ್ತೆ ನದಿ ಉಕ್ಕಿ ಹರಿಯುವಾಗ ನೀರು ಅಂಗಳಕ್ಕೆ ಬಂದು ಅವರ ಅಂಗಳದಲ್ಲಿದ್ದ ಕೊಟ್ಟಿಗೆಯ ಗೋಡೆಯೊಂದು ಕುಸಿಯಿತಂತೆ. ಇನ್ನು ಅದನ್ನು ರಿಪೇರಿ ಮಾಡುವುದು ವ್ಯರ್ಥ. ಒಂದು ವರ್ಷದೊಳಗೆ ಹೊಸ ಮನೆಯನ್ನೇ ಕಟ್ಟಿಸುವುದು ಸೂಕ್ತವೆಂದು ತೀರ್ಮಾನಿಸಿದರು. ಹಾಗಾಗಿ ತಾತ್ಕಾಲಿಕವಾಗಿ ಒಂದು ವರ್ಷದ ಮಟ್ಟಿಗೆ ಇರಲು ಅವರಿಗೆ ಮನೆ ಬೇಕಿತ್ತು. ನಾವು ಎರಡು ವರ್ಷಗಳ ಹಿಂದೆ ಹೇಳಿದ್ದ ಮಾತನ್ನು ನೆನಪಿಟ್ಟುಕೊಂಡು ಕೇಳಲು ಬಂದರು. ನಾವು ಒಪ್ಪಿದೆವು. ಅವರಿಗೂ ಮನೆ ಇಷ್ಟವಾಯಿತು. “ನಾಳೆಯೇ ಬರುತ್ತೇವೆ, ಏಕೆಂದರೆ ಮೊನ್ನೆ ಮೊನ್ನೆ ಭೂಕಂಪವೂ ಆಗಿದೆ. ಅಲ್ಲಿ ಇರಲು ಭಯವಾಗುತ್ತಿದೆ” ಎಂದು ಹೇಳಿ ಹೋದವರು ಮತ್ತೆ ಎರಡು ದಿನಗಳಾದರೂ ಬರಲಿಲ್ಲ. ಕಾರಣ ಏನಿರಬಹುದು ಎಂದು ತಿಳಿಯಲು ಫೋನ್ ಮಾಡಿದಾಗ ಅವರು ಹೇಳಿದ್ದು ಹೀಗೆ: ನಾವು ಬರುವವರೇ. ಆದರೆ ನಮ್ಮಲ್ಲಿ ಮೂರು ದನಗಳು ನಾಲ್ಕು ಕರುಗಳಿವೆ. ಅವುಗಳನ್ನು ಯಾರಿಗಾದರೂ ಮಾರಿಯೇ ಬರಬೇಕಷ್ಟೇ.
ನನಗಿದು ಒಂದು ಸವಾಲೆಂದೆನಿಸಿತು. ಮನೆಯ ಹತ್ತಿರ ಹಟ್ಟಿ ಇಟ್ಟುಕೊಂಡು ಬೆಳೆದವರು ನಾವು. ಇಲ್ಲೊಂದು ಹಟ್ಟಿ ಕಟ್ಟಿದರಾಯಿತು. ನಾನು ಒಂದೇ ಪ್ರಶ್ನೆ ಕೇಳಿದೆ: ಗಿರಾಕಿ ಸಿಕ್ಕಿದರೇ? “ಇಲ್ಲ, ಗೋಶಾಲೆಗಳಲ್ಲೂ ಕೇಳಿದೆ ಅಲ್ಲೂ ಜಾಗ ಇಲ್ಲವೆಂದಿದ್ದಾರೆ” ಎಂದರು ಯಜಮಾನ್ರು. ನಾನು ಹೇಳಿದೆ, “ಸರಿ. ಹಾಗೆಲ್ಲ ಮಾರಲು ಹೋಗಬೇಡಿ. ನೀವು ಕೇಳಿಕೊಂಡು ಹೋದರೆ ಸರಿಯಾದ ಬೆಲೆ ಸಿಗದು. ಇನ್ನು ಯಾರಾದರೂ ಕೊಂಡುಕೊಂಡು ಕಸಾಯಿಖಾನೆಗೆ ಕಳಿಸಿದರೆ ಇಷ್ಟರ ತನಕ ನೀವು ಸಾಕಿ ಬೆಳೆಸಿದ್ದು ದಂಡ. ನಿಮ್ಮೊಂದಿಗೆ ಹಸುಗಳನ್ನೂ ಇಲ್ಲಿಗೇ ತನ್ನಿ. ನಮ್ಮಲ್ಲಿ ಸದ್ಯಕ್ಕೆ ಪೆವಿಲಿಯನ್ ಖಾಲಿ ಇದೆ. ಅಲ್ಲಿ ತಾತ್ಕಾಲಿಕ ಶೆಡ್ ಮಾಡೋಣ. ಮುಂದೆ ಸರಿಯಾದ ಹಟ್ಟಿ ಕಟ್ಟಿದರಾಯ್ತು” ಎಂದೆ.
ಇಷ್ಟಾದ ಬಳಿಕ ಯಜಮಾನ್ರು ಹಸುಗಳ ದಿಬ್ಬಣದೊಂದಿಗೆ ಬಂದು ಮನೆ ಸೇರಿದ್ದಾರೆ. ಹಸುಗಳನ್ನು ನೋಡಿಕೊಳ್ಳುವ ಕೆಲಸ ಅವರದ್ದೇ. ನಮಗೆ ಮತ್ತು ನಮ್ಮ ಶಾಲೆ ಮಕ್ಕಳಿಗೆ ನಿತ್ಯ ಮುಂಜಾನೆ ಗೋದರ್ಶನ ಭಾಗ್ಯ. ಎಷ್ಟೋ ಮಕ್ಕಳ ಮನೆಯಲ್ಲಿ ಈಗ ಗೋಸಾಕಣೆ ಸ್ಥಗಿತಗೊಂಡಿದೆ. ಅವರಿಗೆ ಈ ಸಂಸ್ಕೃತಿಯ ಪರಿಚಯ ಶಾಲೆಯಲ್ಲೇ ಆಗುತ್ತದೆ ಎಂಬ ಖುಷಿ ನಮಗೆ.