ನ್ಯೂಸ್ ನಾಟೌಟ್: ಕೆಲ ಪಾಶ್ಚಿಮಾತ್ಯ ದೇಶಗಳಲ್ಲಿ ಸಲಿಂಗ ಪ್ರೇಮ, ಮದುವೆ ಇವೆಲ್ಲವೂ ಸಾಮಾನ್ಯವಾಗಿದೆ. ಆದ್ರೆ ಭಾರತದಲ್ಲಿ ಇವೆಲ್ಲಾ ಕಾಣಸಿಗುವುದೇ ತೀರಾ ಅಪರೂಪ ಮತ್ತು ಸಂಸ್ಕೃತಿಗೆ ವಿರುದ್ಧ ಎಂಬ ಭಾವನೆ ಇದೆ. ಆದರೆ, ಇತ್ತೀಚಿಗೆ ನಮ್ಮ ದೇಶದಲ್ಲೂ ಸಲಿಂಗ ಪ್ರೇಮ, ಸಲಿಂಗ ವಿವಾಹ ಸಾಮಾನ್ಯವಾದಂತೆ ಕಾಣುತ್ತದೆ. ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಯಾಗುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ.
ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಗಂಡು-ಗಂಡು ಜೋಡಿಯೊಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಇಬ್ಬರೂ ವರರು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಸಾಮಾನ್ಯವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಮರ್ಯಾದೆ ಪ್ರಶ್ನೆ, ಸಮಾಜ ಏನನ್ನುತ್ತೋ ಅನ್ನುವ ಕಾರಣಕ್ಕೆ ಪೋಷಕರೇ ಮಕ್ಕಳ ಸಲಿಂಗ ವಿವಾಹಕ್ಕೆ ಹಿಂದೇಟು ಹಾಕುತ್ತಾರೆ. ಆದರೆ, ಇಲ್ಲೊಂದು ಜೋಡಿ ಹೆತ್ತವರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿಯೇ ಅದ್ದೂರಿಯಾಗಿ ಸಲಿಂಗ ವಿವಾಹವಾಗಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ವ್ಯಕ್ತಿಯೊಬ್ಬರು ವಿಡಿಯೋ ಶೇರ್ ಮಾಡಿಕೊಂಡಿದ್ದು, “ನಾನು ಭಾಗಿಯಾದ ಮೊದಲ ಭಾರತೀಯ ಸಲಿಂಗ ವಿವಾಹ; ಸ್ನೇಹಿತರಷ್ಟೇ ಅಲ್ಲ, ಈ ಮದುವೆಯಲ್ಲಿ ಇವರ ಕುಟುಂಬಸ್ಥರ ಖುಷಿಯನ್ನು ನೋಡಿ ಹೃದಯ ತುಂಬಿ ಬಂತು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.