ನ್ಯೂಸ್ ನಾಟೌಟ್: ಮಹಾ ಕುಂಭಮೇಳದ ವೇಳೆ ಸುದ್ದಿಯಾಗಿದ್ದ ಐಐಟಿ ಬಾಬಾ ಎಂದೇ ಜನಪ್ರಿಯರಾಗಿದ್ದ ಅಭಯ್ ಸಿಂಗ್ ನಿಂದ ಜೈಪುರದಲ್ಲಿ ಗಾಂಜಾ ವಶಪಡಿಸಿಕೊಂಡ ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಭಯ್ ಸಿಂಗ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಿದ್ಧಿ ಸಿದ್ಧಿ ಪ್ರದೇಶದ ಹೋಟೆಲ್ ನಲ್ಲಿ ಉಳಿದುಕೊಂಡು ಗದ್ದಲ ಸೃಷ್ಟಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ನಂತರ ಐಐಟಿ ಬಾಬಾ ನನ್ನ ವಶಕ್ಕೆ ಪಡೆಯಲಾಯಿತು. ಪೊಲೀಸರು ಸ್ಥಳಕ್ಕೆ ತಲುಪಿ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅದು ಕಡಿಮೆ ಪ್ರಮಾಣದಲ್ಲಿತ್ತು ಎಂದು ತಿಳಿದು ಬಂದಿದೆ. ಪತ್ತೆಯಾದ ಗಾಂಜಾ ಪ್ರಮಾಣವು ಅನುಮತಿಸಲಾದ ಮಿತಿಯೊಳಗೆ ಇದ್ದುದರಿಂದ ಪೊಲೀಸರು ಸ್ವಲ್ಪ ಸಮಯದ ನಂತರ ಆತನನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಯಂ ಘೋಷಿತ ಬಾಬಾ, ನನ್ನಲ್ಲಿದ್ದುದು “ಪ್ರಸಾದ” ಎಂದು ಹೇಳಿಕೊಂಡಿದ್ದಾರೆ.
ಮಹಾಕುಂಭ ಮೇಳದ ಬಳಿಕ ದಿನದಿಂದ ದಿನಕ್ಕೆ ವಿವಾದಗಳ ಮೂಲಕವೇ ಅಭಯ್ ಸಿಂಗ್ ಸುದ್ದಿಯಾಗುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಸೋಲು ಅನುಭವಿಸುತ್ತದೆ ಎಂದು ಹೇಳಿಕೆಯನ್ನೂ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಜೊತೆಗೆ ಖಾಸಗಿ ಚಾನೆಲ್ ವೊಂದರಲ್ಲಿ ಇತ್ತೀಚೆಗೆ ಕಿರಿಕ್ ಮಾಡಿ ಸುದ್ದಿಯಾಗಿದ್ದರು.