ನ್ಯೂಸ್ ನಾಟೌಟ್ : ಕೇರಳದಲ್ಲಿ 5 ಜನರನ್ನು ಕೊಂದ 23 ವರ್ಷದ ಯುವಕ ವಿಚಾರಣೆಯ ವೇಳೆ ಪೊಲೀಸರ ಎದುರು ಬೆಚ್ಚಿ ಬೀಳಿಸುವ ಮಾಹಿತಿ ಹೊರಹಾಕಿದ್ದಾನೆ. ಯುವಕ ತನ್ನ ಪ್ರೇಯಸಿಯನ್ನು ಸಹ ಕೊಂದಿದ್ದಾನೆ. ಆ ಬಗ್ಗೆ ಕೇಳಿದಾಗ, ಅವಳು ನಾನಿಲ್ಲದೆ ಒಂಟಿಯಾಗಿ ಬದುಕಲು ಸಾಧ್ಯವಾಗಲಿಲ್ಲ ಅದಕ್ಕೆ ಕೊಂದೆ ಎಂದು ಹೇಳಿದ್ದಾನೆ. ಫೆಬ್ರವರಿ 24ರಂದು ಈ ಘಟನೆಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಚ್ಚರಿಯ ಮಾಹಿತಿಗಳು ಈಗ ಬಹಿರಂಗವಾಗುತ್ತಿವೆ.
ಈ ಯುವಕ ತನ್ನ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, 13 ವರ್ಷದ ತಮ್ಮ ಮತ್ತು ತನ್ನ ಪ್ರೇಯಸಿಯನ್ನು ಕೊಂದಿದ್ದಾನೆ. ಅವನು ತನ್ನ ತಾಯಿಯನ್ನು ಸಹ ಕೊಲ್ಲಲು ಪ್ರಯತ್ನಿಸಿದನು, ಆದರೆ ಆಕೆ ಬದುಕುಳಿದ್ದಾಳೆ. ತಿರುವನಂತಪುರಂ ಬಳಿಯ ವೆಂಜರಮೂಡು ಪ್ರದೇಶದ ಮೂರು ಮನೆಗಳಲ್ಲಿ ಯುವಕ ಇವರನ್ನು ಕೊಂದಿದ್ದಾನೆ. ಮನೆಗಳ ನಡುವಿನ ಅಂತರ 20-25 ಕಿಲೋಮೀಟರ್ ಇದೆ ಎನ್ನಲಾಗಿದೆ.
ಆತನ ಗೆಳತಿ ದೇಹ ಕುರ್ಚಿಯ ಮೇಲೆ ಕುಳಿತಿದ್ದು, ತಲೆಯ ಕೆಳಗೆ ನೆಲದ ಮೇಲೆ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಆಕೆಯ ಹಣೆಯ ಮೇಲೆ ಭಾರೀ ಗಾಯವಾಗಿದ್ದು, ಸುತ್ತಿಗೆಯಿಂದ ಬಲವಾದ ಹೊಡೆತ ಬಿದ್ದಿದೆ ಎಂದು ವರದಿಯಾಗಿದೆ. ತನ್ನ ಚಿಕ್ಕಪ್ಪ ಲತೀಫ್ ಮನೆಗೆ ಹೋಗಿ, ಅವನನ್ನು ಅತ್ಯಂತ ಕ್ರೂರವಾಗಿ ಕೊಂದನು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರೋಪಿಗಳು ಲತೀಫ್ ತಲೆಗೆ 20 ಕ್ಕೂ ಹೆಚ್ಚು ಬಾರಿ ಸುತ್ತಿಗೆಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲತೀಫ್ ಮೃತದೇಹ ಡ್ರಾಯಿಂಗ್ ರೂಮಿನಲ್ಲಿ ಕುರ್ಚಿಯ ಮೇಲೆ ತಲೆಬುರುಡೆ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಲತೀಫ್ ಅವರ ಪತ್ನಿ ಸಜಿತಾ ಅವರು ಅಡುಗೆಮನೆಯಲ್ಲಿ ಚಹಾ ತಯಾರಿಸುತ್ತಿದ್ದಾಗ ಆರೋಪಿ ಹಿಂದಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅವರಿಗೆ ಸುತ್ತಿಗೆಯಿಂದ ಹಲವಾರು ಹೊಡೆತಗಳು ಬಿದ್ದಿದ್ದು, ಅವರ ಶವ ಅಡುಗೆಮನೆಯ ಬಳಿ ಪತ್ತೆಯಾಗಿದೆ.
ಇಷ್ಟೆಲ್ಲಾ ಕೊಲೆಗಳನ್ನು ಮಾಡಿದ ನಂತರ, ಅಫಾನ್ ಶಾಂತವಾಗಿ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಮೂರು ಸ್ಥಳಗಳಲ್ಲಿ ಆರು ಜನರ ಮೇಲೆ(ತಾಯಿ ಬದುಕಿದ್ದಾರೆ) ಹಲ್ಲೆ ನಡೆಸಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಈಗ ಅವರೆಲ್ಲರೂ ಸತ್ತಿರುತ್ತಾರೆ ಎಂದು ಹೇಳಿದ್ದಾನೆ.
ತನಿಖಾ ಅಧಿಕಾರಿಗಳು ಹೇಳುವಂತೆ ಅಫಾನ್ ಮಾದಕ ದ್ರವ್ಯ ವ್ಯಸನಿಯಾಗಿದ್ದನು ಮತ್ತು ಇದನ್ನು ಬೆಂಬಲಿಸುವ ಪುರಾವೆಗಳನ್ನು ಸಿಕ್ಕಿವೆ ಎನ್ನಲಾಗಿದೆ.
ವರದಿಯ ಪ್ರಕಾರ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಆರೋಪಿ ಮಾದಕ ವಸ್ತು ಸೇವಿಸಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತಿಳಿಸಿದ್ದಾರೆ. ವೈಜ್ಞಾನಿಕ ತನಿಖೆಯ ನಂತರ ಡ್ರಗ್ ನ ನಿಜವಾದ ಸ್ವರೂಪವನ್ನು ಕಂಡುಹಿಡಿಯಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ತನ್ನ ಮುದ್ದಿನ ಬೆಕ್ಕಿನ ಮೃತದೇಹದ ಜೊತೆ 2 ದಿನ ಕಳೆದು ನೇಣಿಗೆ ಶರಣಾದ ಮಹಿಳೆ..! ಇಲ್ಲಿದೆ ಮನಕಲಕುವ ಘಟನೆ..!
ಕೇರಳದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದರು. ಕೊಲೆಗಳು “ಕ್ರೂರ ಮತ್ತು ಪೂರ್ವ ಯೋಜಿತ” ಎಂದು ತೋರುತ್ತದೆ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಯಾವುದೇ ದಿಢೀರ್ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಈ ಮಧ್ಯೆ, ಆರೋಪಿ ಇಂತಹ ಅಪರಾಧ ಮಾಡಬಲ್ಲನೆಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನೆರೆಹೊರೆಯವರು ಮತ್ತು ಸಂಬಂಧಿಕರು ಹೇಳಿದ್ದಾರೆ ಎನ್ನಲಾಗಿದೆ.
ಆರೋಪಿ ಮನೆ ಬಳಿ ಟೀ ಅಂಗಡಿ ನಡೆಸುತ್ತಿದ್ದ ಮಹಿಳೆಯೊಬ್ಬರು, “ಅವನು ಹೀಗೆ ಮಾಡಿದನೆಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಅವನು ಒಳ್ಳೆಯ ಹುಡುಗ. ಅವನ ಬಗ್ಗೆ ನಾವು ಒಂದು ಕೆಟ್ಟ ಮಾತನ್ನೂ ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.