ನ್ಯೂಸ್ ನಾಟೌಟ್: ಗಂಗಾಜಲವೆಂದರೆ ಹಿಂದೂಗಳಿಗೆ ಅತಿ ಪವಿತ್ರವಾದುದು. ಸನಾತನ ಧರ್ಮದಲ್ಲಿ ಗಂಗಾ ನದಿಯ ಪಾತ್ರ ದೊಡ್ಡದು. ಪ್ರತಿ ಪೂಜೆಗೂ ಗಂಗೆಯಿದ್ದರೇನೇ ಶ್ರೇಷ್ಠ ಎನ್ನಲಾಗುತ್ತದೆ. ಗಂಗೆಯಲ್ಲಿ ಮಿಂದವರ ಸರ್ವ ಪಾಪಗಳೂ ಪರಿಹಾರ ಕಾಣುತ್ತವೆ, ಮೋಕ್ಷ ಸಿಗುತ್ತದೆ. ಮತ್ತೆ ಹುಟ್ಟು ಸಾವಿನ ಚಕ್ರಕ್ಕೆ ಸಿಕ್ಕಿಕೊಳ್ಳಬೇಕಿಲ್ಲ ಎಂಬ ನಂಬಿಕೆ ಇದೆ. ಅಲ್ಲದೆ, ಮನುಷ್ಯ ಜೀವನದ ಅಂತಿಮ ಪಯಣ ಆರಂಭಿಸುತ್ತಿದ್ದಾನೆಂಬ ಸುಳಿವು ಸಿಗುತ್ತಿದ್ದಂತೆ ಗಂಗಾ ಜಲ ಬಾಯಿಗೆ ಬಿಟ್ಟರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಹಿಂದೂಗಳಲ್ಲಿದೆ. ಹೀಗಾಗಿ ಗಂಗಾ ಜಲಕ್ಕೆ ಬೇಡಿಕೆ ಹೆಚ್ಚಿದೆ.ಹೀಗಾಗಿ ಕೆಲವರು ಜಲವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಗಂಗಾ ಜಲ ಮಾರಾಟ ಸರಿಯಲ್ಲ ಎಂದಿದ್ದಾರೆ.
ಮಹಾಕುಂಭ, ತಲಕಾಡು ಮೇಳ ಯಾವುದೇ ಆಗಿರಲಿ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಮೂಲದಿಂದ ಬಂದಿದೆ ಅಂತ ಮಾರಾಟ ಸರಿಯೇ ಎಂದು ಪ್ರಶ್ನಿಸಿದ್ದಾರೆ.ಮಹಾಶಿವರಾತ್ರಿ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗಂಗಾನದಿ ನೀರು ಕಲುಷಿತವಾಗಿದೆ ಎಂದು ಸ್ವತಃ ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಉತ್ತರ ಪ್ರದೇಶದ ಸರ್ಕಾರಿ ಸಂಸ್ಥೆಗಳು ಕುಂಭಮೇಳಕ್ಕೂ ಮೊದಲೇ ಹೇಳಿದ್ದವು. ಆದರೆ, ಖಾಸಗಿ ಕಂಪನಿಗಳು ಅದೇ ನೀರನ್ನು ಮಾರಾಟ ಮಾಡುತ್ತಿವೆ. ಧರ್ಮದ ಹೆಸರಿನಲ್ಲಿ ಹೀಗೆ ವಾಣಿಜ್ಯೀಕರಣ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ.
ಮನುಷ್ಯನ ದೇಹ, ಪ್ರಾಣಿ ದೇಹ ಅದರಲ್ಲಿ ತೇಲುತ್ತಿವೆ. ಅವರದ್ದೇ ಮಂಡಳಿ ವರದಿ ಕೊಟ್ಟಿದೆ. ಅದೇ ನೀರನ್ನು ಮಾರಾಟ ಮಾಡುತ್ತಿದ್ದಾರೆ. ನಾನು ಅದನ್ನು ಪ್ರಶ್ನೆ ಮಾಡುತ್ತಿದ್ದೇನೆ. ನಮ್ಮ ಪರಂಪರೆ ಉಳಿಸಿ. ಆದರೆ, ಅದೇ ಹೆಸರಿನಲ್ಲಿ ವಾಣಿಜ್ಯೀಕರಣ ಬೇಡ ಎಂದು ಹೇಳಿದರು.
ನಷ್ಟ ಯಾರಿಗೆ?
ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು, ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿಸುವುದು ಖಂಡನೀಯ ಎಂದ ಅವರು, ಶೇ. 12ರಷ್ಟು ರೋಗಗಳ ಮೂಲ ಗಂಗಾನದಿ ನೀರು ಎಂದು ವರದಿಗಳೇ ಹೇಳುತ್ತವೆ. ನೀರು ಇದ್ದರೆ ತಾನೆ ನಾವು? ನೀರು ಇದ್ದರೆ ತಾನೆ ಕೃಷಿ? ನೀರು ಕಲುಷಿತಗೊಂಡರೆ ನಷ್ಟ ಯಾರಿಗೆ? ನಮಗೇ ಅಲ್ಲವೇ ಎಂದು ಪ್ರಶ್ನಿಸಿದರು.
ಹೆಚ್ಡಿಕೆ ಮಾತನಾಡಲಿ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಡಿನೋಟಿಪಿಕೇಷನ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮುಡಾ ನಿವೇಶನ ಹಂಚಿಕೆ ಪ್ರಕರಣ ಕುರಿತು ಮಾತನಾಡಿದ್ದರು. ಈಗ ಕುಮಾರಸ್ವಾಮಿ ಅವರ ಪ್ರಕರಣದ ಬಗ್ಗೆಯೂ ಮಾತನಾಡಲಿ’ ಎಂದು ಈ ಸಂದರ್ಭದಲ್ಲಿ ಹೇಳಿದರು.