ನ್ಯೂಸ್ ನಾಟೌಟ್: ಮೊದಲೇ ಹುಡುಗಿಯರು ಇಲ್ಲ ಅಂತ ಹೇಳಿ ಕೆಲ ಮದುವೆ ವಯಸ್ಸಿಗೆ ಬಂದ ಹುಡುಗರು ಪ್ರಾಣವನ್ನು ಕಳೆದು ಕೊಳ್ಳುತ್ತಿದ್ದಾರೆ. ಆದರೆ ಸಿಕ್ಕಿರುವ ಹುಡುಗಿಯನ್ನಾದರೂ ಸರಿಯಾಗಿ ಮದುವೆ ಆಗಬೇಕಲ್ವ? ಆ ಮದುವೆಗೂ ಕುಡ್ಕೊಂಡು ಬಂದ್ರೆ ಹೆಂಗೆ? ಜೀವನದಲ್ಲಿ ಮದುವೆ ಅನ್ನೋದು ಒಂದು ಸಲ ಆಗುತ್ತೆ.ಅದನ್ನಾದರೂ ಕರೆಕ್ಟಾಗಿ ಆಗ್ಬೇಕಲ್ವ?ಆದರೆ ಇಲ್ಲೊಬ್ಬ ಕಂಠಪೂರ್ತಿ ಕುಡಿದು ವಧುವಿಗೆ ಹಾರ ಹಾಕೋ ಬದಲು ವಧುವಿನ ಆತ್ಮೀಯ ಸ್ನೇಹಿತೆಯ ಕೊರಳಿಗೆ ಹೂ ಮಾಲೆ ಹಾಕಿದ ಘಟನೆ ಬಗ್ಗೆ ವರದಿಯಾಗಿದೆ.
ಇದರಿಂದ ಸಿಟ್ಟಿಗೆದ್ದ ವಧು ವರನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ವಿವಾಹ ಮಂಟಪದಿಂದ ಹೊರನಡೆದ ಘಟನೆ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.ಈ ಘಟನೆ ಶನಿವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆದರೆ ಮದುವೆ ವಿಚಾರದಲ್ಲಿ ವರ ಉದ್ದೇಶಪೂರ್ವಕವಾಗಿ ನಾಟಕವಾಡಿರುವುದಾಗಿ ವಧುವಿನ ಸಂಬಂಧಿಕರು ಆರೋಪಿಸಿದ್ದಾರೆ.
ವಧುವಿನ ಕುಟುಂಬದವರು ದಾಖಲಿಸಿರುವ ದೂರಿನ ಪ್ರಕಾರ, ವರ ರವೀಂದ್ರ ಕುಮಾರ್ (26ವರ್ಷ) ಮೆರವಣಿಗೆ ಮೂಲಕ ವಿವಾಹ ಮಂಟಪಕ್ಕೆ ಆಗಮಿಸಿದ್ದ. ವಿವಾಹಕ್ಕೂ ಮೊದಲು ವರನಿಗೆ 2.5 ಲಕ್ಷ ರೂಪಾಯಿ ನೀಡಲಾಗಿತ್ತು. ನಂತರ ವಿವಾಹದ ದಿನ ಬೆಳಗ್ಗೆ 2 ಲಕ್ಷ ರೂ. ನೀಡಲಾಗಿತ್ತು. ಆದರೆ ವರನ ಪೋಷಕರು ಮತ್ತಷ್ಟು ವರದಕ್ಷಿಣೆಗೆ ಬೇಡಿಕೆ ಇಟ್ಟಿರುವುದಾಗಿ ವಧುವಿನ ತಂದೆ ಆರೋಪಿಸಿದ್ದಾರೆ.ಮತ್ತೊಂದು ಮೂಲಗಳ ಪ್ರಕಾರ, ರವೀಂದ್ರ ಕುಮಾರ್ ಗೆ ತನ್ನ ಆಯ್ಕೆಯ ಯುವತಿಯನ್ನು ವಿವಾಹವಾಗಲು ಬಯಸಿದ್ದ. ಈ ಕಾರಣದಿಂದಲೇ ವರ ವಿವಾಹ ಮಂಟಪಕ್ಕೆ ಆಗಮಿಸುವ ಮೊದಲೇ ಮದ್ಯಪಾನ ಸೇವಿಸಿ ಮಂಟಪಕ್ಕೆ ಬಂದು ವಧುವಿನ ಕುಟುಂಬ ಸದಸ್ಯರ ಜತೆ ಅಸಭ್ಯವಾಗಿ ವರ್ತಿಸಿದ್ದ. ನಂತರ ಸಂಪ್ರದಾಯದಂತೆ ಹೂವಿನ ಹಾರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ವರ ವಧುವಿನ ಪಕ್ಕದಲ್ಲೇ ನಿಂತಿದ್ದ ಆಕೆಯ ಸ್ನೇಹಿತೆಯ ಕೊರಳಿಗೆ ಹಾರ ಹಾಕಿಬಿಟ್ಟಿದ್ದ ಎಂದು ಹೇಳಲಾಗಿದೆ.