ನ್ಯೂಸ್ ನಾಟೌಟ್: ಕಾಫಿ ಉದ್ಯಮಿಯೊಬ್ಬರು ಸರ್ಕಾರಿ ಶಾಲೆಯೊಂಕ್ಕೆ ಬರೋಬ್ಬರಿ 2.18 ಕೋಟಿ ರೂ. ದೇಣಿಗೆ ನೀಡಿರುವ ವಿಶೇಷ ವರದಿ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಆ ಉದ್ಯಮಿ ತನ್ನ ಮಗನನ್ನೂ ಅದೇ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ ಅನ್ನೋದು.ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿನ ಈ ಉದ್ಯಮಿ ಮುದ್ರೆಮನೆ ಕಾಫಿ ಕ್ಯೂರಿಂಗ್ ಘಟಕದ ಮಾಲೀಕ. ಹೆಸರು ಸಂತೋಷ್, ಸರ್ಕಾರಿ ಶಾಲೆಯಲ್ಲಿ ಓದಿ, ನಂತರ ಕಾಫಿ ಉದ್ಯಮದಲ್ಲಿ ಸಾಧನೆ ಮಾಡಿದ್ದಾರೆ. ಸದ್ಯ ಅವರು ಕಾಫಿ ರಫ್ತು ಉದ್ಯಮ ನಡೆಸುತ್ತಿದ್ದಾರೆ.
ಸಂತೋಷ್ ಮುತ್ತಿಗೆಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.18 ಕೋಟಿ ರೂ. ದೇಣಿಗೆ ನೀಡಿದ್ದಾರೆ. 1973 ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಪ್ರಸ್ತುತ 363 ವಿದ್ಯಾರ್ಥಿಗಳು ಇದ್ದಾರೆ ಎಂದು ವರದಿ ತಿಳಿಸಿದೆ. ಸಂತೋಷ್ ಅವರ ದೇಣಿಗೆಯ ನೆರವಿನಿಂದ ಶಾಲೆಯಲ್ಲಿ ಎಂಟು ಸುಸಜ್ಜಿತ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. 18 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ದೇಣಿಗೆಯ ನೆರವಿನಿಂದ ‘ವಿವೇಕ ಯೋಜನೆಯ’ಡಿಯಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಹೆಚ್ಚುವರಿ ತರಗತಿ ಕೊಠಡಿಗಳನ್ನು ಸೇರಿಸಲಾಗಿದೆ. ಫೆಬ್ರವರಿ 28 ರಂದು ಒಟ್ಟು 12 ತರಗತಿ ಕೊಠಡಿಗಳನ್ನು ಉದ್ಘಾಟಿಸಲಾಗುವುದು ಎಂದು ಹೇಳಲಾಗಿದೆ.ಅಂದಹಾಗೆ, ಮುತ್ತಿಗೆಪುರದ ಈ ಶಾಲೆಗೆ ಅನೇಕ ದಾನಿಗಳಿಂದ ದೇಣಿಗೆಗಳು ಹರಿದು ಬರುತ್ತಿವೆ.
ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಈ ಗ್ರಾಮದ ಉದ್ಯಮಿ ಸಿದ್ದಿಕ್, ಶಾಲೆಗೆ 60,000 ರೂ. ಮೌಲ್ಯದ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕವನ್ನು ದಾನ ಮಾಡಿದ್ದಾರೆ. ಶಾರ್ಲಿನ್ ವಿಲಿಯಮ್ಸ್ ಎಂಬ ಕಂಪನಿಯು 18 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ನೀಡಿದೆ. ಯೂತ್ ಫಾರ್ ಸೇವಾ ಸಂಸ್ಥೆಯು ಎಂಟು ಕಂಪ್ಯೂಟರ್‌ಗಳು ಮತ್ತು ಅವುಗಳ ಬಳಕೆಗೆ ಅಗತ್ಯವಿರುವ ಟೇಬಲ್‌ಗಳನ್ನು ಒದಗಿಸಿದೆ. ಶಾಲಾ ಆವರಣ ಮತ್ತು ತರಗತಿ ಕೊಠಡಿಗಳಲ್ಲಿ 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ದಾನಿಗಳು ಮುಂದೆ ಬಂದಿದ್ದಾರೆ.