ನ್ಯೂಸ್ ನಾಟೌಟ್ : ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಅಮೆರಿಕನ್ ಏರ್ ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ವಿಮಾನ ರೋಮ್ ನಗರದಲ್ಲಿ ತುರ್ತಾಗಿ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
280 ಪ್ರಯಾಣಿಕರನ್ನು ಹೊತ್ತಿದ್ದ ಬೋಯಿಂಗ್ 787-9 ಡ್ರೀಮ್ ಲೈನರ್ ವಿಮಾನವನ್ನು ಕ್ಯಾಸ್ಪಿಯನ್ ಸಮುದ್ರದ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಪಶ್ಚಿಮಾಭಿಮುಖವಾಗಿ ಇಟೆಲಿಯತ್ತ ತಿರುಗಿಸಲಾಯಿತು.
ವಿಮಾನದ ಟ್ರ್ಯಾಕಿಂಗ್ ಮಾಹಿತಿ ಪ್ರಕಾರ ಎಎ292 ವಿಮಾನ ನ್ಯೂಯಾರ್ಕ್ ನಿಂದ ಶನಿವಾರ ರಾತ್ರಿ 8.30ಕ್ಕೆ ಹೊರಟಿತ್ತು. 14 ಗಂಟೆಗಳ ಪ್ರಯಾಣದ ಬಳಿಕ ಮರುದಿನ ಬೆಳಿಗ್ಗೆ ಭಾರತದ ರಾಜಧಾನಿ ತಲುಪಬೇಕಿತ್ತು. ಆದರೆ 10 ಗಂಟೆಗಳ ಪ್ರಯಾಣದ ಬಳಿಕ ಕಪ್ಪುಸಮುದ್ರ ಪ್ರದೇಶದಲ್ಲಿ ದಿಢೀರನೇ ವಿಮಾನವನ್ನು ಹಿಮ್ಮುಖವಾಗಿ ತಿರುಗಿಸಲಾಯಿತು. ಬಳಿಕ ರೋಮ್ ನ ಫ್ಯುಮಿಸಿನೊ ವಿಮಾನ ನಿಲ್ದಾಣದತ್ತ ಪಥ ಬದಲಿಸಲಾಯಿತು.
ಇಟೆಲಿಯ ವಾಯುಪ್ರದೇಶ ಸಮೀಪಿಸುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಇಟಲಿಯ ಯುದ್ಧವಿಮಾನಗಳ ಬೆಂಗಾವಲಿನಲ್ಲಿ ವಿಮಾನವನ್ನು ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 5.30ಕ್ಕೆ ರೋಮ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಇದನ್ನೂ ಓದಿ: ಸುಳ್ಳಾಯ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಬಗೆಗಿನ ಐಐಟಿ ಬಾಬಾ ಭವಿಷ್ಯ..! ಗೂಗಲ್ ಟ್ರೆಂಡ್ ನಲ್ಲಿ ಮತ್ತೆ ಐಐಟಿ ಬಾಬಾ..!
ಅಧಿಕಾರಿಗಳು ನಿಖರವಾದ ಕಾರಣವನ್ನು ತಿಳಿಸಿಲ್ಲವಾದರೂ, ವಾಯುಮಾರ್ಗದ ಮಧ್ಯೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಏರ್ ಲೈನ್ಸ್ ಹಾಗೂ ಭದ್ರತಾ ಅಧಿಕಾರಿಗಳು ತುರ್ತು ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಬೇಕಾಯಿತು ಎನ್ನಲಾಗಿದೆ. ಇಟಲಿ ರಾಜಧಾನಿಯಲ್ಲಿ ಅಮೆರಿಕನ್ ಏರ್ ಲೈನ್ಸ್ ಕಾರ್ಯಾಚರಣೆ ನೆಲೆಯನ್ನು ಹೊಂದಿರುವುದರಿಂದ ಸಮೀಪದ ರೋಮ್ ನಲ್ಲಿ ವಿಮಾನ ಇಳಿಸಲಾಯಿತು ಎಂದು ತಿಳಿದುಬಂದಿದೆ.