ನ್ಯೂಸ್ ನಾಟೌಟ್: ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.
ಯುವತಿ ಕಾರಿನಲ್ಲಿ ಸಾವನ್ನಪ್ಪಿದ್ದಾಳೆ. ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾಗಿದೆ.
ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಇದೆ ಎನ್ನಲಾಗಿದೆ. ಯುವಕ ಕಾರು ನಿಂತ ಜಾಗದ ಪಕ್ಕದ ಮರಕ್ಕೆ ವೇಲ್ ನಿಂದ ನೇಣು ಹಾಕಿಕೊಂಡಿದ್ದಾನೆ. ಯುವಕ ನೇಣು ಹಾಕಿಕೊಂಡಿರುವ ರೀತಿಯಲ್ಲಿ ದೇಹ ಪತ್ತೆಯಾಗಿದೆ. ಕಾರು ಕೂಡ ರಸ್ತೆಯಲ್ಲಿ ನಿಂತಿಲ್ಲ. ರಸ್ತೆ ಬದಿಯ ಪಕ್ಕದ ಚರಂಡಿಗೆ ಎರಡು ಚಕ್ರಗಳು ಇಳಿದ ಸ್ಥಿತಿಯಲ್ಲಿತ್ತು.
ಕಾರು ಮೂಲತಃ ಬೆಂಗಳೂರು ನೋಂದಣಿಯದ್ದಾಗಿದ್ದು, ಎಲ್ಲೋ ಬೋರ್ಡ್ ಗಾಡಿಯಾಗಿದೆ. ಮೇಲ್ನೋಟಕ್ಕೆ ಮೃತ ಯುವಕ ಡ್ರೈವರ್ ಇರಬಹುದು ಎಂದು ಅಂದಾಜಿಸಲಾಗಿದ್ದು, ಮೂಲತಃ ಬೆಂಗಳೂರಿನ ಮಾಗಡಿಯವನು ಎಂದು ತಿಳಿದು ಬಂದಿದೆ. ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.