ನ್ಯೂಸ್ ನಾಟೌಟ್: ಅನ್ನಭಾಗ್ಯ ಯೋಜನೆಯ ಹಣದ ಬದಲು ಅಕ್ಕಿ ಕೊಡಲು ಕರ್ನಾಟಕ ಸರ್ಕಾರ ತೀರ್ಮಾನಿಸಲಾಗಿದೆ. ಇಷ್ಟು ದಿನಗಳ ಕಾಲ ಹೆಚ್ಚುವರಿ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ 170 ರೂ. ನೀಡಲಾಗುತ್ತಿತ್ತು. ಇದೀಗ, ಹಣದ ಬದಲು 10 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದು, ಇದೇ ತಿಂಗಳಿನಿಂದ ನೀಡಲಿದ್ದೇವೆ ಎಂದು ಆಹಾರ ಸಚಿವ ಕೆಹೆಚ್ ಮುನಿಯಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳಿಂದಲೇ ಅಕ್ಕಿಯನ್ನ ಗ್ರಾಹಕರಿಗೆ ಕೊಡುತ್ತಿದ್ದೇವೆ. ನಮಗೆ ಬೇಕಾಗಿರುವ 5 ಕೆಜಿ ಅಕ್ಕಿಯನ್ನು ಕೊಡಲು ಕೇಂದ್ರ ಸರ್ಕಾರವು ಒಪ್ಪಿಗೆ ಕೊಟ್ಟಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆ ಇದೆ. ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಅಕ್ಕಿ ಅವಶ್ಯಕತೆ ಇದೆ ಎಂದು ಹೇಳಿದರು.
ನಮ್ಮ ಇಲಾಖೆ ಅಧಿಕಾರಿಗಳು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸ್ಪಂದಿಸಿದ್ದಾರೆ. ಈಗ ಕೇಂದ್ರ ಸಚಿವರು ಅಕ್ಕಿ ಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಈಗಾಗಲೇ ನವೆಂಬರ್ ವರೆಗೂ ಹಣ ನೀಡಿದ್ದೇವೆ. ಜನವರಿವರೆಗಿನ ಹಣವನ್ನು ಡಿಬಿಟಿ ಮೂಲಕ ಹಾಕುತ್ತೇವೆ. ಫೆಬ್ರುವರಿಯಿಂದ 10 ಕೆಜಿ ಅಕ್ಕಿ ಕೊಡುವ ತೀರ್ಮಾನ ಮಾಡಿದ್ದೇವೆ. 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಅಕ್ಕಿ, ಹಣ ಎರಡನ್ನೂ ಕೊಟ್ಟಿದ್ದೇವೆ ಎಂದರು.