ನ್ಯೂಸ್ ನಾಟೌಟ್: ಬೈತಡ್ಕದಲ್ಲಿ ಕಾರೊಂದು ಶನಿವಾರ ತಡರಾತ್ರಿ ಸೇತುವೆಗೆ ಗುದ್ದಿ ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದು ಅದರಲ್ಲಿದ್ದ ಯುವಕರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಈಗ ತೆರೆ ಬಿದ್ದಿದೆ. ಸಾಯುವ ಕೆಲವೇ ನಿಮಿಷಕ್ಕೂ ಮೊದಲು ಯುವಕರು ಕರೆ ಮಾಡಿದ್ದರು ಎನ್ನುವ ಒಂದು ಹೇಳಿಕೆ ಇಡೀ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು. ಯುವಕರು ಬದುಕಿದ್ದಾರೆಯೇ ಅನ್ನುವ ಸಂಶಯಕ್ಕೂ ಕಾರಣವಾಗಿತ್ತು. ವಿಟ್ಲ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೂಡ ದಾಖಲಾಗಿತ್ತು.
ಈ ಮಾಹಿತಿಯ ಪ್ರಕಾರ ಪೊಲೀಸರು ತನಿಖೆ ಮಾಡಿದ್ದರು. ಕಾರು ಅಪಘಾತಕ್ಕೆ ಬೇರೆಯದ್ದೇ ಆದ ಆಯಾಮಗಳಿವೆಯೇ ಎಂದು ತನಿಖೆ ನಡೆಸುತ್ತಿದ್ದಾಗ ಯುವಕರಿಬ್ಬರ ಮೃತದೇಹವು ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ವಿಟ್ಲದ ಧನುಷ್ ಹಾಗೂ ಕನ್ಯಾನದ ಧನಂಜಯ ಮೃತ ಹುಡುಗರು. ಇವರು ಶನಿವಾರ ರಾತ್ರಿ ಅತಿಯಾದ ವೇಗದಿಂದ ಕಾರು ಚಲಾಯಿಸಿ ಕಾಣಿಯೂರಿನ ಬೈತಡ್ಕ ಎಂಬಲ್ಲಿ ಹೊಳೆಗೆ ಬಿದ್ದಿದ್ದರು. ಅಪಘಾತ ನಡೆದು 200 ಮೀ. ವ್ಯಾಪ್ತಿಯಲ್ಲಿ ಮೃತದೇಹವು ಮೊದಲು ಪತ್ತೆಯಾಗಿದ್ದು, ಸ್ವಲ್ಪ ಅಂತರದಲ್ಲೇ ಎರಡನೇ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಳಿಸಲಾಗಿದೆ. ನಂತರವಷ್ಟೇ ಅಧಿಕೃತ ಮಾಹಿತಿ ಹೊರಬೀಳಲಿದೆ.