ನ್ಯೂಸ್ ನಾಟೌಟ್ :ಬಾಯಾರಿದವರಿಗೆ ಬಾವಿ ತೋಡಿ ನೀರುಣಿಸುವ ಗಂಗಾ ಮಾತೆ ಈಗ ಮತ್ತೆ ಸುದ್ದಿಯಾಗಿದ್ದಾಳೆ.ಹೌದು, ಕಳೆದ ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬಳು ಅಂಗನವಾಡಿ ಬಳಿ ಮಕ್ಕಳಿಗಾಗಿ ಬಾವಿ ತೋಡಿ ಮಕ್ಕಳ ದಾಹವನ್ನು ತಣಿಸಿದವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.ಇದೀಗ ಮತ್ತದೇ ಮಹಿಳೆ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಲು ಸಾಧ್ಯವಾಗದು ಎಂದು ಅರಿತು ಮನೆ ಹಿತ್ತಲಲ್ಲೇ ಒಬ್ಬಂಟಿಯಾಗಿ 40 ಅಡಿ ಬಾವಿ ತೋಡಿ ‘ಗಂಗಾ’ ಜಲ ಸೃಷ್ಟಿಸಿಕೊಂಡ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಘಟನೆ ನಡೆದಿದೆ. 57 ವರ್ಷದ ಗೌರಿ ನಾಯ್ಕ್ ಎಂಬವರೇ ಈ ಸಾಧನೆ ಮಾಡಿದವರು.ಮಹಾಕುಂಭಕ್ಕೆ ಹೋಗಲು ಅದೃಷ್ಟವಂತರಾಗಿರಬೇಕು. ಸಣ್ಣ ಕೃಷಿ ಭೂಮಿ ಇರುವ, ಆದಾಯ ಕಡಿಮೆ ಇರುವ ನನಗೆ ಅದು ಸಾಧ್ಯವಾಗದು. ಅದಕ್ಕಾಗಿ ನಾನು ಇಲ್ಲಿಯೇ ಬಾವಿ ಅಗೆದು ಗಂಗೆಯನ್ನು ತರಲು ನಿರ್ಧರಿಸಿದೆ ಎಂದು ಗೌರಿ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಗೌರಿ ಸುಮಾರು 40 ಅಡಿ ವರೆಗೆ ಬಾವಿ ತೋಡಿದ್ದರು. ಬಾವಿಯಲ್ಲಿ ಸಾಕಷ್ಟು ನೀರು ದೊರೆತಿರುವುದಕ್ಕೆ ಸಂತಸಗೊಂಡಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.
ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ಸಾಕಷ್ಟು ಹಣವಿಲ್ಲ ಎಂಬ ಅರಿವೂ ಅವರಿಗಿತ್ತು. ಆಗಲೇ ಅವರು ಬಾವಿ ತೋಡಲು ನಿರ್ಧರಿಸಿದರು ಮತ್ತು ಡಿಸೆಂಬರ್ 15 ರಿಂದಲೇ ಕೆಲಸ ಪ್ರಾರಂಭಿಸಿದ್ದರು ಎನ್ನಲಾಗಿದೆ.ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಹೇಳಿದ ಪ್ರಕಾರ, ಗೌರಿ ದಿನಕ್ಕೆ ಸುಮಾರು 6-8 ಗಂಟೆಗಳ ಕಾಲ ಮಣ್ಣನ್ನು ಅಗೆಯುವ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದ ಎರಡು ತಿಂಗಳ ನಂತರ ಫೆಬ್ರವರಿ 15 ರಂದು ಬಾವಿಯನ್ನು ಪೂರ್ಣಗೊಳಿಸಿದ್ದರು. ಬಾವಿಯಲ್ಲಿ ನೀರಿನ ಒರತೆಯೂ ಚಿಮ್ಮಿ ಬಂದಿತ್ತು.ಇವರು ಈ ಹಿಂದೆಯೂ ನಾಲ್ಕು ಬಾವಿಗಳನ್ನು ತೋಡಿದ್ದಾರೆ. ಒಂದು ಕೃಷಿಗಾಗಿ ತನ್ನ ಹೊಲದಲ್ಲಿ, ಇನ್ನೊಂದು ತನ್ನ ಹಳ್ಳಿಯ ಜನರ ಬಾಯಾರಿಕೆ ನೀಗಿಸಲು ಮತ್ತು ಮೂರನೆಯದು 2024 ರ ಮಧ್ಯ ಭಾಗದಲ್ಲಿ ಶಿರಸಿಯ ಗಣೇಶ ನಗರ ಅಂಗನವಾಡಿ ಶಾಲೆಗಾಗಿ ಎಂದು ಹೇಳಲಾಗಿದೆ.