ನ್ಯೂಸ್ ನಾಟೌಟ್: ಸುಳ್ಯದ ಪ್ರತಿಭೆ ಮಯೂರ್ ಅಂಬೆಕಲ್ಲು ನಿರ್ದೇಶಿಸಿರುವ ಕನ್ನಡ ಚಲನಚಿತ್ರ ‘ಭಾವ ತೀರ ಯಾನ’ದ ಟ್ರೇಲರ್ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವು ನೆಹರೂ ಮೆಮೋರಿಯಲ್ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಫೆಬ್ರವರಿ 10 ರಂದು ನಡೆಯಿತು.ಚಲನಚಿತ್ರದ ಸಂಗೀತ ನಿರ್ದೇಶಕ ಮಯೂರ್ ಅಂಬೆಕಲ್ಲು ತಮ್ಮ ನಿರ್ದೇಶನದ ಚಲನಚಿತ್ರದ ಹಿನ್ನಲೆ ಮತ್ತು ಪೋಷಕರ ಪ್ರೇರಣೆಯಿಂದ ನಿರ್ದೇಶಿಸಿದ ಅನುಭವವನ್ನು ಹಂಚಿಕೊಂಡರು.
ಈ ಕುರಿತಾಗಿ ಚಲನಚಿತ್ರದ ನಿರ್ಮಾಪಕ ಶೈಲೇಶ್ ಅಂಬೆಕಲ್ಲು ಮಾತನಾಡಿ ಫೆಬ್ರವರಿ 21 ರಂದು ಚಿತ್ರ ಬಿಡುಗಡೆಗೊಳ್ಳಲಿದ್ದು ಚಲನಚಿತ್ರವನ್ನು ಅತೀ ಹೆಚ್ಚು ಸಿನಿಮಾ ಪ್ರೀಯರು ವಿಕ್ಷಣೆ ಮಾಡಿ ಬೆಂಬಲಿಸುವಂತೆ ವಿನಂತಿಸಿದರು. ಚಿತ್ರತಂಡದ ನಾಯಕ ನಟ ತೇಜಸ್ ಕಿರಣ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.ಚಿತ್ರತಂಡದ ಸಹ ನಟರಾದ ಸಂದಿಪ್ ರಾಜಗೋಪಾಲ್, ಹೃತಿಕ್, ಮನೋಜ್ ಹಾಗೂ ಚಲನಚಿತ್ರದ ನಿರ್ದೇಶಕ ಮಯೂರ್ ಅಂಬೆಕಲ್ಲುರವರ ತಾಯಿ ಅಶ್ವಿನಿ ಶೈಲೇಶ್ ಅಂಬೆಕಲ್ಲು ಮತ್ತು ತಂಗಿ ಕ್ಷಮಾ ಅಂಬೆಕಲ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ಮಮತ ಕೆ. ಉಪಸ್ಥಿತರಿದ್ದರು. ಡಾ. ಅನುರಾಧ ಕುರುಂಜಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.