ನ್ಯೂಸ್ ನಾಟೌಟ್: ಡ್ರಾಮಾ ಜೂನಿಯರ್ ನಿರೂಪಕ, ಖ್ಯಾತ ಸಿನಿಮಾ ನಟ ಮಾಸ್ಟರ್ ಆನಂದ್ ಸೋಮವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಶಾಂತಿವನ ಟ್ರಸ್ಟ್ ಆಯೋಗದಲ್ಲಿ ನಡೆದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಪ್ರಕಟಿಸಲಾದ ಜ್ಞಾನ ವಿಕಾಸ ಮತ್ತು ಜ್ಞಾನ ಪ್ರಕಾಶ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ನೀಡಿ ಬಳಿಕ ಮಾತನಾಡಿದ ಮಾಸ್ಟರ್ ಆನಂದ್, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳ ದರ್ಶನದಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಈವರೆಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆ ಸಾರ್ಥಕ ಜೀವನ ನಡೆಸುವಂತಾಗಬೇಕು ಎಂದು ಹೇಳಿದರು. ಈ ವೇಳೆ ಪುತ್ರಿ ವಂಶಿಕಾ ಕೂಡ ಜತೆಗಿದ್ದರು.
ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ. ಎಲ್ಲವೂ ಒಂದೇ ಆಗಿದೆ. ಆದರೆ ಕಾನೂನಿನಲ್ಲಿ ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ಬೇರೆ ಬೇರೆಯಾಗಿದ್ದು, ಅನೈತಿಕತೆ ಅಪರಾಧ ಅಲ್ಲ ಎಂಬ ಭಾವನೆ ಈಗ ಮೂಡಿ ಬಂದಿದೆ ಎಂದು ಹಿರಿಯ ಸಾಹಿತಿ ಎಸ್.ಎನ್. ಸೇತುರಾಮ್ ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ, ಜ್ಞಾನ ಸಂಗ್ರಹದೊಂದಿಗೆ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಪ್ರತಿಭಾ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು. ಶಿಕ್ಷಣ ಇಲಾಖೆಯ ಸಹನಿರ್ದೇಶಕ ಎಸ್.ಜಿ. ನಾಗೇಶ್, ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.