ನ್ಯೂಸ್ ನಾಟೌಟ್: ಸಂಪಾಜೆ, ಚೆಂಬು, ಪೆರಾಜೆಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಭೂಕಂಪ ಆಗಿರುವ ಬಗ್ಗೆ ಸ್ಥಳೀಯರಿಂದ ಅಥವಾ ಅಧಿಕಾರಿಗಳಿಂದ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಯಾವುದೇ ದೂರು ಬಂದಿಲ್ಲ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂಪಾಜೆ ಸೇರಿದಂತೆ ಸುಳ್ಯ ಭಾಗದಲ್ಲಿ ಆರನೇ ಭಾರಿಗೆ ಬೆಳಗ್ಗೆ ಮೂರು ಗಂಟೆಗೆ ಭಾರಿ ಶಬ್ಧದೊಂದಿಗೆ ಭೂಕಂಪ ಸಂಭವಿಸಿದೆ. ಜನರೆಲ್ಲ ಹೆದರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟ ಅನನ್ಯ ವಾಸುದೇವ್, ಜನರಲ್ಲಿ ಸಾಧ್ಯವಾದಷ್ಟು ಧೈರ್ಯ ತುಂಬುವ ಕೆಲಸ ಮಾಡಿ. ಅನಗತ್ಯವಾಗಿ ಯಾರೂ ಸುಳ್ಳು ಸುದ್ದಿಗೆ ಕಿವಿಕೊಡಬೇಡಿ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನಾವು ಜವಾಬ್ದಾರಿ ಅರಿತು ಕೆಲಸ ಮಾಡೋಣ. ಕಂಪನ ಸಂಭವಿಸಿದ್ದು ನಿಜವಾಗಿದ್ದರೆ ನನಗೆ ಹತ್ತಾರು ಕರೆ ಬರುತ್ತದೆ. ಆದರೆ ಅಂತಹ ಯಾವುದೇ ಕರೆಗಳು ನನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.