ನ್ಯೂಸ್ ನಾಟೌಟ್ : ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ ಎಂಬಲ್ಲಿ ವೃದ್ಧ ದಂಪತಿಯ ಕೊಲೆಗೈದ ಪ್ರಕರಣದಲ್ಲಿ ಗದಗದ ರಾಜು ಕಲ್ಲವಡ್ಡರ್ ಯಾನೆ ರಾಜೇಶ್ ಯಾನೆ ರಾಜು ಕಲ್ಲವಡ್ಡರ್ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.
2016ರ ನವೆಂಬರ್ 10 ರ ರಾತ್ರಿ ವೃದ್ಧ ದಂಪತಿ ವರ್ಕಿ ಕೆ.ವಿ (85) ಮತ್ತು ಎಲಿಕುಟ್ಟಿ(80) ಎಂಬವರನ್ನು ರಾಜು ಕಲ್ಲವಡ್ಡರ್ ಕೊಲೆಗೈದು ಅವರ ಮನೆಯಲ್ಲಿದ್ದ ನಗ ನಗದು ಸೇರಿದಂತೆ 4.50 ರೂ. ಮೌಲ್ಯದ ಸೊತ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದನು.
ನೆರಿಯಾ ಗ್ರಾಮದ ಬಾಂಜಾರುಮಲೆಗೆ ಡ್ಯಾಂನ ಕೂಲಿ ಕೆಲಸಕ್ಕೆ ಬಂದಿದ್ದ ಆರೋಪಿ ರಾಜು ಕಲ್ಲವಡ್ಡರ್ ವರ್ಕಿ ಕೆ.ವಿ. ಮನೆಯ ಬಳಿ ಬಂದು ಮೂಗನಂತೆ ನಟಿಸಿ, ದಾರಿ ಕೇಳುವ ನೆಪದಲ್ಲಿ ಅವರನ್ನು ಸ್ವಲ್ಪ ದೂರಕ್ಕೆ ಕರೆದುಕೊಂಡು ಬಂದು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ, ಬಳಿಕ ಬಟ್ಟೆಯಿಂದ ಕುತ್ತಿಗೆಯನ್ನು ಬಿಗಿದು ಉಸಿರು ಕಟ್ಟಿಸಿ ಕೊಲೆಗೈದಿದ್ದನು. ಬಳಿಕ ಮನೆಯೊಳಗೆ ಪ್ರವೇಶಿಸಿ ಸೊತ್ತುಗಳನ್ನು ಜಾಲಾಡುತ್ತಿರುವಾಗ, ಎಚ್ಚರಗೊಂಡ ಎಲಿಕುಟ್ಟಿ ಅವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಬಟ್ಟೆಯಿಂದ ಕುತ್ತಿಗೆಯನ್ನು ಬಿಗಿದು ಕೊಲೆಗೈದು, ಮನೆಯೊಳಗಿದ್ದ 25 ಪವನ್ ಚಿನ್ನ ಮತ್ತು ನಗದನ್ನು ದೋಚಿಸಿ ಪರಾರಿಯಾಗಿರುವುದಾಗಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ, ಆತ ದೋಚಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಅಂದಿನ ಪೊಲೀಸ್ ಉಪಾಧೀಕ್ಷರಾಗಿದ್ದ ರಾಹುಲ್ ಕುಮಾರ್ ಪ್ರಕರಣದ ಭಾಗಶ: ತನಿಖೆ ಪೂರೈಸಿದ್ದರು. ಬಳಿಕ ಪ್ರಕರಣದ ಮುಂದುವರಿದ ತನಿಖೆಯನ್ನು ಉಪಾಧೀಕ್ಷಕ ಭಾಸ್ಕರ ರೈ ಎನ್.ಜಿ. ಅವರು ಒಟ್ಟು 51 ಸಾಕ್ಷಿದಾರರನ್ನು ವಿಚಾರಣೆ ಮಾಡಿ ದೋಷಾರೋಪನಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ವಿಶೇಷ) ನ್ಯಾಯಾಲಯ ನ್ಯಾಯಧೀಶರಾದ ಪ್ರೀತಿ ಕೆ.ಪಿ. ಅವರು ಆರೋಪಿ ರಾಜು ಕಲ್ಲವಡ್ಡರ್ ತಪ್ಪಿತಸ್ಥನೆಂದು ಜ.18 ರಂದು ತೀರ್ಪು ನೀಡಿದ್ದು, ಜ.25ರಂದು ಆರೋಪಿಗೆ ಭಾ.ದಂ.ಸಂ. ಕಲಂ 392 ರಂತೆ 10 ವರ್ಷಗಳ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ಭಾ.ದಂ.ಸಂ ಕಲಂ 302ರಂತೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 3 ತಿಂಗಳ ಕಠಿಣ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
Click