ನ್ಯೂಸ್ ನಾಟೌಟ್ : ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪೂಂಜಾಲಕಟ್ಟೆಯ ಕುಕ್ಕಿಪ್ಪಾಡಿ ಎಂಬಲ್ಲಿ ನಡೆದಿದೆ.ಈತ ಇನ್ಸ್ಟಾಗ್ರಾಂನಲ್ಲಿ ತನಗೆ ಪರಿಚಯವಾಗಿದ್ದ ಹುಡುಗಿಗೆ ಲೈಕ್ ಕೊಟ್ಟಿದ್ದ. ಈ ವೇಳೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ.ಇದೇ ಕಾರಣಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತನಿಗೆ ಇನ್ಸ್ಟಾಗ್ರಾಂನಲ್ಲಿ ಕುಂದಾಪುರದ ಚೈತನ್ಯ ಎಂಬ ಯುವತಿ ಜತೆ ಪರಿಚಯವಾಗಿದ್ದು, ಬಳಿಕ ಪ್ರೀತಿಸಿ 8 ತಿಂಗಳ ಹಿಂದೆ ಇವರಿಬ್ಬರಿಗೂ ನಿಶ್ಚಿತಾರ್ಥ ನೆರವೇರಿತ್ತು.ಸಾಮಾನ್ಯವಾಗಿ ಹಲವರು ಇನ್ಸ್ಟಾದಲ್ಲಿ ಫೋಟೋ ವಿಡಿಯೋ ಹಾಕುತ್ತಿರುತ್ತಾರೆ.ಹಾಗೆ ಪರಿಚಯಸ್ಥ ಹುಡುಗಿಗೆ ಜ.21ರಂದು ಚೇತನ್ ಲೈಕ್ ನೀಡಿದ್ದ. ಇದನ್ನು ಪ್ರಶ್ನಿಸಲು ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಚೇತನ್ ಮನೆಗೆ ಬಂದಿದ್ದಳು ಎನ್ನಲಾಗಿದೆ.
ಚೇತನ್ ತಾಯಿ ಈ ವೇಳೆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಸಂದರ್ಭ ಯುವತಿಗೆ ಲೈಕ್ ನೀಡಿದ್ದಕ್ಕೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಚೇತನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಇದರಿಂದ ಮನನೊಂದು ಚೇತನ್ ಯುವತಿ ಮನೆಯಲ್ಲಿ ಇರುವ ಸಂದರ್ಭದಲ್ಲೇ ಮನೆಯೊಳಗೆ ತೆರಳಿ ಮನೆಯ ಮೇಲ್ಛಾವಣಿಗೆ ಬಟ್ಟೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆ ಆದ ಬಳಿಕ ಚೇತನ್ ತಾಯಿಗೆ ಚೈತನ್ಯ ಕರೆ ಮಾಡಿದ್ದಾಳೆ.ಚೇತನ್ ಮಲಗಿದ್ದಾತ ಏಳುತ್ತಿಲ್ಲ ಎಂದು ಹೇಳಿ ಕರೆಸಿಕೊಂಡಿದ್ದಾಳೆ. ಮನೆಯ ಮೆಲ್ಛಾವಣಿಯ ಗಮನಿಸಿದಾಗ ನೇಣು ಬಿಗಿದ ಕುಣಿಕೆ ಸಿಕ್ಕಿದೆ. ನೇಣು ಬಿಗಿದ ಬಳಿಕ ಚೇತನ್ನನ್ನು ಯುವತಿಯೇ ಕೆಳಗೆ ಇಳಿಸಿದ್ದಳು ಎನ್ನಲಾಗಿದೆ. ಘಟನೆ ಸಂಬಂಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.