ನ್ಯೂಸ್ ನಾಟೌಟ್: ಕೇರಳ ಉದ್ಯಮಿ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕಾರು ಹಾಗೂ ಡರೋಡೆಕೋರರ ಕಾರು ಪತ್ತೆಯಾಗಿದೆ. ದರೋಡೆ ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಮೂರು ತಂಡ ರಚಿಸಿ ಪೊಲೀಸರು ತನಿಖೆಗಿಳಿದಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯ ಹಾರೋಹಳ್ಳಿ ಬಳಿ ಸೋಮವಾರ(ಜ.20) ಬೆಳಗ್ಗೆ 9.15 ಗಂಟೆ ವೇಳೆ ಕೇರಳ ಮೂಲದ ಉದ್ಯಮಿ ಅಶ್ರಫ್ ಅಹಮ್ಮದ್ ಹಾಗೂ ಆತನ ಚಾಲಕ ಸೂಫಿ ಎಂಬುವವರು ಚಲುಸುತ್ತಿದ್ದ ಕಾರನ್ನು, ಎರಡು ಕಾರುಗಳಲ್ಲಿ ಬಂದ ದರೋಡೆಕೋರರು ಅಡ್ಡಗಟ್ಟಿ ಕಾರಿನಿಂದ ಅವರನ್ನು ಕೆಳಗಿಳಿಸಿ, ಹಲ್ಲೆ ಮಾಡಿ ಹಣದ ಸಮೇತ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಸುಮಾರು 12 ಕಿ.ಮೀ. ದೂರದಲ್ಲಿ ಉದ್ಯಮಿಯ ಕಾರನ್ನು ಬಿಟ್ಟು, ಅದರಲ್ಲಿದ್ದ 1.5 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಉದ್ಯಮಿಯ ಕಾರು ಮಾಂಬಳ್ಳಿ ಎಂಬಲ್ಲಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ದರೋಡೆಕೋರರು ಬಳಸಿದ್ದ ಎರಡು ಕಾರುಗಳ ಪೈಕಿ ಒಂದು ಕಾರನ್ನು 6 ಕಿ.ಮೀ ದೂರದ ಗೋಪಾಲ್ ಪುರ ಎಂಬಲ್ಲಿ ಬಿಟ್ಟು ಹೋಗಿದ್ದಾರೆ. ಈ ಎರಡು ಕಾರುಗಳನ್ನ ಪೊಲೀಸರು ಇಂದು(ಜ.21) ವಶಕ್ಕೆ ಪಡೆದಿದ್ದಾರೆ.
ಕಳೆದ 9 ವರ್ಷಗಳಿಂದ ಚಾಕೊಲೇಟ್ ವ್ಯಾಪಾರ ಮಾಡುತ್ತಿರುವ ಅಶ್ರಫ್, ಅಡಕೆ ಖರೀದಿಸಲೆಂದು ಹೆಚ್.ಡಿ.ಕೋಟೆಗೆ ಫೋರ್ಡ್ ಎಕೋ ಸ್ಪೋರ್ಟ್ ಕಾರಿನಲ್ಲಿ ಹೋಗುತ್ತಿದ್ದಾಗ, ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿ ಬಂದ ಐವರು ಮುಸುಕುಧಾರಿಗಳು, ಬೆಳಗ್ಗೆ ಸುಮಾರು 9.15 ಗಂಟೆ ವೇಳೆ ಸಿನಿಮೀಯ ಶೈಲಿಯಲ್ಲಿ ಕಾರು ಅಡ್ಡಗಟ್ಟಿದ್ದಾರೆ.
ನಂತರ ಐದಾರು ಜನರು ಕಾರನ್ನು ಸುತ್ತುವರೆದು ಜಾಕ್, ರಾಡ್ನಿಂದ ಕಾರಿನ ಸೈಡ್ ಗಾಜುಗಳನ್ನು ಒಡೆದು ಹಾಕಿ, ಅಶ್ರಫ್ ಮತ್ತು ಆತನ ಕಾರು ಚಾಲಕ ಸೂಫಿ ಅವರನ್ನು ಕಾರಿನಿಂದ ಕೆಳಗಿಳಿಸಿ ಹಣ ಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿರೋಧ ಒಡ್ಡಿದ ಅಶ್ರಫ್ ಮತ್ತು ಸೂಫಿ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರಿನಲ್ಲಿದ್ದ 1.5 ಲಕ್ಷ ರೂ. ನಗದು ದೋಚಿ ಕಾರಿನೊಂದಿಗೆ ಹೆಚ್.ಡಿ ಕೋಟೆಯ ಕಡೆಗೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
Click