ನ್ಯೂಸ್ ನಾಟೌಟ್: ತೆಲುಗು ಚಿತ್ರರಂಗದ ನಿರ್ಮಾಪಕರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ಶಾಕ್ ಕೊಟ್ಟಿದ್ದಾರೆ. ತೆಲುಗು ಚಿತ್ರರಂಗದ ಹಲವು ನಿರ್ಮಾಪಕರ ನಿವಾಸ ಹಾಗೂ ಕಚೇರಿಯ ಮೇಲೆ ಇಂದು(ಜನವರಿ 21) ಮಂಗಳವಾರ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚಿಗೆ ತೆರೆಕಂಡು ಮಕಾಡೆ ಮಲಗಿದ ಗೇಮ್ ಚೇಂಜರ್ ಮತ್ತು ದಾಖಲೆಯ ಕಲೆಕ್ಷನ್ ಮಾಡಿದ್ದ ಪುಷ್ಪ 2 ಚಿತ್ರಗಳ ನಿರ್ಮಾಪಕರಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
450 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಗೇಮ್ ಚೇಂಜರ್ ಸಿನಿಮಾದ ಬಂಡವಾಳವೂ ಸಹ ವಾಪಸ್ ಬರದೇ ಕಂಗೆಟ್ಟಿರುವ ನಿರ್ಮಾಪಕ ದಿಲ್ ರಾಜುಗೆ ಇದೀಗ ಐಟಿ ಸಂಕಷ್ಟ ಎದುರಾಗಿದೆ. ಇಂದು ದಿಲ್ ರಾಜು ಅವರ ಮನೆ, ಕಚೇರಿ ಹಾಗೂ ಅವರ ಕುಟುಂಬಸ್ಥರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಿಲ್ ರಾಜುಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಸುಮಾರು 65 ಜನರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಿಲ್ ರಾಜು ನಿರ್ಮಾಣ ಸಂಸ್ಥೆಯ ಕಚೇರಿ, ವಾಸವಿದ್ದ ನಿವಾಸ ಸಹೋದರ ಸಿರೇಶ್ ಹಾಗೂ ಮಗಳು ಹನ್ಸಿತಾ ರೆಡ್ಡಿ ಮನೆಗಳ ಮೇಲೂ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಚಿತ್ರದ ನಿರ್ಮಾಣ ಸಂಸ್ಥೆ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನವೀನ್ ಅವರ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ವಸ್ತುನ್ನಾಮ್ ಚಿತ್ರದ ನಿರ್ದೇಶಕ ಅನಿಲ್ ರಾವಿಪುಡಿ ಕಚೇರಿ ಹಾಗೂ ವೆಂಕಟೇಶ್ವರ ಪ್ರೊಡಕ್ಷನ್ ಸಂಸ್ಥೆ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆದಿದೆ.
Click