ನ್ಯೂಸ್ ನಾಟೌಟ್ : ಕಳೆದೊಂದು ವಾರದಿಂದ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿ ಭಾಗಗಳಲ್ಲಿ ಸರಣಿ ಭೂಕಂಪನದ ಅನುಭವ ಆಗುತ್ತಿದ್ದು ಜನರು ಭಯಭೀತರಾಗಿದ್ದಾರೆ. ಮುಂದೆ ಇನ್ನೇನೂ ಕಾದಿದೆಯೋ ಅನ್ನುವಂತಹ ಆತಂಕ ಈ ಭಾಗದ ಜನರನ್ನು ಕಾಡುತ್ತಿದೆ. ಭವಿಷ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 5.0 ಗಿಂತಲೂ ತೀವ್ರತೆಯ ಭೂಕಂಪನವಾಗುವ ಸಾಧ್ಯತೆ ಇದೆ ಎನ್ನುವಂತಹ ಮಾಹಿತಿಯನ್ನು ತಜ್ಞರಾದ ಶ್ರೇಯಸ್ವಿ ಚಂದ್ರಶೇಖರ್ ಅವರು ಖಾಸಗಿ ವೆಬ್ ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಭೂಕಂಪ ನಿರೋಧಕ ಕಟ್ಟಡ ಅನಿವಾರ್ಯ
ಈ ಭೂಕಂಪನಗಳು ಅಪಾಯಕಾರಿಯಲ್ಲದಿದ್ದರೂ ಭವಿಷ್ಯದಲ್ಲಿ ಅಷ್ಟೊಂದು ಗಟ್ಟಿಯಲ್ಲದ ಕಟ್ಟಡಗಳು ಕುಸಿಯಬಹುದು, ದೃಢ ಕಟ್ಟಡ ಬೀಳದಿದ್ದರೂ ಬಿರುಕು ಬರಬಹುದು. ಹಾಗಾಗಿ ಭೂಕಂಪ ನಿರೋಧಕ ಕಟ್ಟಡಗಳು ಭವಿಷ್ಯದಲ್ಲಿ ಅನಿವಾರ್ಯ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭೂಕಂಪನಕ್ಕೆ ಏನು ಕಾರಣ? .
ಅಧ್ಯಯನದ ಪ್ರಕಾರ ಭೂಗರ್ಭದಲ್ಲಿರುವ ಯುರೇಶಿಯನ್ ಪ್ಲೇಟ್ ಮತ್ತು ಇಂಡಿಯನ್ ಟೆಕ್ಟೋನಿಕ್ ಪ್ಲೇಟ್ ಗಳ ತಿಕ್ಕಾಟದಿಂದ ಭೂಕಂಪ ನಡೆಯುತ್ತದೆ. ಭೂಗರ್ಭದಲ್ಲಿರುವ ಸ್ತರಭಂಗ (ಫಾಲ್ಟ್)ಗಳ ಕುಸಿತದಿಂದಲೂ ಕಂಪನ ಉಂಟಾಗುತ್ತದೆ. ಮರ ಕಡಿದು ನಾಶ ಮಾಡುವುದು, ಕಲ್ಲುಕೋರೆಗಳ ನಿರ್ಮಾಣ, ಬಂಡೆ ಒಡೆಯುವುದಕ್ಕೆ ಡೈನಾಮೈಟ್ ಬಳಕೆ ಮಾಡುವುದರಿಂದ ಭೂಕಂಪನದ ಸಾಧ್ಯತೆಗಳು ಹೆಚ್ಚಿವೆ.