ನ್ಯೂಸ್ ನಾಟೌಟ್: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಕನಿಷ್ಠ 12 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಮತ್ತು 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ(ಜ.17) ತಿಳಿಸಿದ್ದು, ಮೃತ ಭಾರತೀಯರು ಯುದ್ಧದಲ್ಲಿ ರಷ್ಯಾ ಪರ ಹೋರಾಡುತ್ತಿದ್ದರು ಎಂದು ಸಚಿವಾಲಯ ತಿಳಿಸಿದೆ.
ಈ ಕುರಿತು ಮಾಧ್ಯಮಗಳ ಜೊತೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದು, ಇಂದಿನವರೆಗೆ ರಷ್ಯಾ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪ್ರಜೆಗಳ 126 ಪ್ರಕರಣಗಳು ವರದಿಯಾಗಿವೆ. ಈ 126 ಪ್ರಕರಣಗಳಲ್ಲಿ 96 ಜನರು ಭಾರತಕ್ಕೆ ಮರಳಿದ್ದಾರೆ ಮತ್ತು ರಷ್ಯಾದ ಸಶಸ್ತ್ರ ಪಡೆಗಳಿಂದ ಬಿಡುಗಡೆಗೊಂಡಿದ್ದಾರೆ. ರಷ್ಯಾ ಸೇನೆಯಲ್ಲಿ ಇನ್ನು 18 ಭಾರತೀಯ ಪ್ರಜೆಗಳು ಉಳಿದಿದ್ದಾರೆ. ಅವರಲ್ಲಿ 16 ಮಂದಿ ಎಲ್ಲಿದ್ದಾರೆ ಎಂಬ ಸುಳಿವೇ ಇಲ್ಲ. ರಷ್ಯಾ ಅವರನ್ನು ನಾಪತ್ತೆಯಾಗಿದ್ದಾರೆ ಎಂದು ಹೇಳಿಕೊಂಡಿದೆ. ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 12 ಭಾರತೀಯ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಉಕ್ರೇನ್-ರಷ್ಯಾ ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದ ಕೇರಳದ ತ್ರಿಶೂರ್ ನಿವಾಸಿಯಾದ ಬಿನಿಲ್ ಬಾಬು(32) ಇತ್ತೀಚೆಗೆ ಮೃತಪಟ್ಟಿದ್ದರು. ಬಿನಿಲ್ ಬಾಬು ಮೃತದೇಹವನ್ನು ಭಾರತಕ್ಕೆ ತರಲು ಭಾರತೀಯ ರಾಯಭಾರಿ ಕಚೇರಿ ರಷ್ಯಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯದಿಂದ ಈ ಹೇಳಿಕೆ ಹೊರ ಬಿದ್ದಿದೆ.
ಉಕ್ರೇನ್ ಜೊತೆಗಿನ ರಷ್ಯಾದ ಸಂಘರ್ಷದಲ್ಲಿ ಮತ್ತೋರ್ವ ಭಾರತೀಯ ಪ್ರಜೆ ಜೈನ್ ಟಿಕೆ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಮಾಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಮುಗಿದ ನಂತರ ಅವರು ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
Click