ನ್ಯೂಸ್ ನಾಟೌಟ್: ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿವೃತ್ತರಾಗಿ ಮಂಗಳೂರಿಗೆ ವಾಪಸ್ ಬಂದಿದ್ದರು. ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನೆಲೆಸಿದ್ದರು. ಇವರ ಬಳಿ 15 ಹಳೆ ನಾಣ್ಯಗಳಿದ್ದವು. ಈ ನಾಣ್ಯಗಳಿಗೆ ಕೋಟ್ಯಂತರ ಹಣ ನೀಡಲಾಗುವುದು ಎಂದು ಸೈಬರ್ ವಂಚಕರು ನಂಬಿಸಿ ವಂಚಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಬಂದ ಹಳೆ ನಾಣ್ಯ ಖರೀದಿಯ ಜಾಹೀರಾತಿನ ಬಲೆಗೆ ಬಿದ್ದ ವ್ಯಕ್ತಿಯನ್ನು ವಾಟ್ಸಾಪ್ ಮೂಲಕ ಸೈಬರ್ ಖದೀಮರು ಸಂಪರ್ಕಿಸಿದ್ದರು. ನಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49 ಲಕ್ಷ ಹಣ ನೀಡುವುದಾಗಿ ತಿಳಿಸಿದ್ದರು.
ಮೊದಲಿಗೆ ಆರ್ ಬಿಐ ನೋಂದಣಿ ಮಾಡಲು 750 ರೂ. ಹಣ ಪಾವತಿಸುವಂತೆ ಸೈಬರ್ ಖದೀಮರು ತಿಳಿಸಿದ್ದರು. ನಂತರ ಆರ್ಬಿಐ ಶುಲ್ಕ, ಜಿಎಸ್ಟಿ, ಐಟಿಆರ್ ಎಂದು 3.50 ಲಕ್ಷ ವಂಚಿಸಿದ್ದಾರೆ. ಬಳಿಕ ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂಧೆ ಎಂದು ನಕಲಿ ಹೆಸರಿನಲ್ಲಿ ವಾಟ್ಸಪ್ ಮೂಲಕ ಸೈಬರ್ ವಂಚಕರು ಪರಿಚಯಿಸಿಕೊಂಡರು.
ಆರ್ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ ಎಂದು ವಂಚಕ ಗದರಿದ್ದಾನೆ. ಆರ್ಬಿಐ ಗೈಡ್ ಲೈನ್ಸ್ ಪ್ರಕಾರ, 12.55 ಲಕ್ಷ ಪಾವತಿಸಬೇಕೆಂದು ಸೂಚನೆ ನೀಡಿದ್ದಾನೆ. ಬಳಿಕ ನಾವು ಚೆಕ್ ಮಾಡಿ, 1 ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸುತ್ತೇವೆ ಎಂದಿದ್ದ. ಮತ್ತೆ ಸಂಪರ್ಕಿಸಿ ಹಂತ ಹಂತವಾಗಿ ಒಟ್ಟು 58,26,399 ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Click