ನ್ಯೂಸ್ ನಾಟೌಟ್: ಕೊಡಗು ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಡಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಕಳೆದ ಮೂರು ದಿನಗಳಲ್ಲಿ ೨ನೇ ಸಲ ಭೂಕಂಪನದ ಅನುಭವವಾಗಿದೆ. ಸಹಜವಾಗಿಯೇ ಇದರಿಂದ ಜನರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಮೊನ್ನೆ ಶನಿವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದೀಗ ಮಂಗಳವಾರ ಬೆಳಗ್ಗೆ ೭.೪೫ಕ್ಕೆ ಮತ್ತೊಮ್ಮೆ ಮೊನ್ನೆಗಿಂತಲೂ ತೀವ್ರವಾಗಿ ಭೂಮಿ ಜೋರಾದ ಶಬ್ಧದೊಂದಿಗೆ ಕಂಪಿಸಿದೆ. ಈ ಸರಣಿ ಕಂಪನದಿಂದ ಜನರು ಭಯಭೀತರಾಗಿದ್ದಾರೆ. ಇದಕ್ಕೆ ಕಾರಣ ೨೦೧೮ರಲ್ಲಿ ಆಗಸ್ಟ್ ನಲ್ಲಿ ಸಂಭವಿಸಿದ್ದ ಕೊಡಗು ದುರಂತದ ಹೋಲಿಕೆ. ಅಂದು ಕೊಡಗು ದುರಂತದಲ್ಲಿ ಅಪಾರ ಜೀವಹಾನಿ, ಆಸ್ತಿಪಾಸ್ತಿ ನಷ್ಟದಿಂದ ಜನರು ಬೀದಿಗೆ ಬಿದ್ದ ನೆನಪುಗಳು ಇನ್ನೂ ಹಸಿಯಾಗಿದೆ. ಹೀಗಿರುವಾಗ ಮತ್ತೆ ಕಂಪನದ ಅನುಭವಗಳು ಇಲ್ಲಿನ ಜನರನ್ನು ಭಾರಿ ಆತಂಕಕ್ಕೆ ದೂಡಿದೆ. ಇದು ಮತ್ತೊಂದು ದುರಂತದ ಸೂಚನೆ ಆಗಿರಬಹುದೇ ಅನ್ನುವ ಅನುಮಾನ ಇಲ್ಲಿನ ಜನರಿಗೆ ಕಾಡುತ್ತಿದೆ.
ಅಂದು ಕೊಡಗು ದುರಂತಕ್ಕೂ ಎರಡು ತಿಂಗಳು ಮೊದಲು ಸಣ್ಣ ಪುಟ್ಟ ಶಬ್ದಗಳು ಕಂಪನಗಳೊಂದಿಗೆ ಭೂಮಿ ಆಗಾಗ್ಗೆ ನಡುಗುತ್ತಿತ್ತು. ಇದಕ್ಕೆ ಜನರು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ೨೦೧೮ ಆಗಸ್ಟ್ ೩ನೇ ವಾರದಲ್ಲಿ ಕೊಡಗು ಇದೆಂದೂ ಕಾಣದ ರೀತಿಯಲ್ಲಿ ದುರಂತಕ್ಕೆ ಸಾಕ್ಷಿಯಾಯಿತು. ಬೆಟ್ಟ ಗುಡ್ಡಗಳು ಜರಿದವು. ರಸ್ತೆಗಳು ಬಾಯ್ತೆರದು ನಿಂತಿದ್ದವು. ನೀರಿನೊಂದಿಗೆ ಮರ ಗಿಡ ಮಣ್ಣು ಕುಸಿಯುತ್ತ ಧರೆಗೆ ಉರುಳಿದ್ದವು. ಆ ದಿನಗಳನ್ನು ನೆನಪಿಸಿಕೊಂಡ ಕೊಡಗಿನ ಎರಡನೇ ಮೊಣ್ಣಂಗೇರಿಯ ನಿವಾಸಿ ನಾಣಯ್ಯ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ್ದು ಹೀಗೆ, ‘ಮೂರು ವರ್ಷಗಳ ಹಿಂದೆ ಕೊಡಗು ದುರಂತ ಸಂಭವಿಸುವುದಕ್ಕೆ ಎರಡು ತಿಂಗಳು ಮೊದಲು ಭಾರಿ ಶಬ್ಧ ಕೇಳಿಸುತ್ತಿತ್ತು. ನೆಲ ಕಂಪಿಸುತ್ತಿತ್ತು. ನಂತರ ಒಂದು ದಿನ ದೊಡ್ಡ ದುರಂತ ಸಂಭವಿಸಿಯೇ ಬಿಟ್ಟಿತು. ಇದೀಗ ಮತ್ತೆ ಅಂತಹುದೇ ಶಬ್ಧ, ಕಂಪನವಾಗುತ್ತಿದೆ. ನಾವು ಭಯಭೀತರಾಗಿದ್ದೇವೆ’ ಎಂದು ತಿಳಿಸಿದರು.
ಕೊಡಗಿನಲ್ಲಿ ಆಗುತ್ತಿದ್ದ ಕಂಪನ,ಶಬ್ಧದ ಅನುಭವ ಈಗ ಕೊಡಗಿನ ಗಡಿ ಭಾಗವಾಗಿರುವ ಸಂಪಾಜೆ, ಊರುಬೈಲು, ಗೂನಡ್ಕ, ಅರಂತೋಡು, ಪೆರಾಜೆ, ಸುಳ್ಯದ ಹಲವು ಭಾಗಗಳಿಗೂ ವಿಸ್ತರಿಸಿದೆ. ಇಲ್ಲೇನಾದರೂ ಬೆಟ್ಟ ಗುಡ್ಡ ಜರಿಯಬಹುದೇ ಅನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಇದೆಂದೂ ಕಾಣದ ಅನುಭವಗಳು ಕಳೆದ ಮೂರು ದಿನಗಳಿಂದ ನಮ್ಮ ಸಂಪಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದೆ. ಈ ಬಗ್ಗೆ ಇಲ್ಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಮ್ಮ ಪಂಚಾಯತ್ ಸದಸ್ಯ ಅಬುಶಾಲಿ ಅವರ ಮನೆ ಎರಡನೇ ಸಲ ಭೂಕಂಪಕ್ಕೆ ಬಿರುಕು ಬಿಟ್ಟಿದೆ. ಈ ಕೂಡಲೇ ಜಿಲ್ಲಾಡಳಿತ ಜನರಿಗೆ ಈ ಬಗ್ಗೆ ಅರಿವಿನ ಕಾರ್ಯಕ್ರಮ ಹಮ್ಮಿಕೊಂಡು ಗೊಂದಲ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.