ನ್ಯೂಸ್ ನಾಟೌಟ್ : ಮೈಸೂರಿನ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮೂವರು ಕೈದಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೇಕ್ ತಯಾರಿಕೆಗೆ ಬಳಸುವ ಎಸ್ಸೆನ್ಸ್ ದ್ರವ ಕುಡಿದ ಪರಿಣಾಮ ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಆದರೆ, ನಿಖರವಾಗಿ ಕಾರಣ ತಿಳಿದುಬಂದಿಲ್ಲ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾದೇಶ್, ನಾಗರಾಜ್ ಮತ್ತು ರಮೇಶ್ ಮೃತ ಕೈದಿಗಳು ಎಂದು ಗುರುತಿಸಲಾಗಿದೆ. ಮೂವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ಗುಂಡ್ಲುಪೇಟೆಯ ಮಾದೇಶ್ ಮೃತಪಟ್ಟಿದ್ದ. ನಿನ್ನೆ (ಜ.07) ಚಾಮರಾಜನಗರ ಮೂಲದ ನಾಗರಾಜ್ ಮೃತಪಟ್ಟಿದ್ದ. ಇಂದು (ಜನವರಿ 08) ಮಂಡ್ಯ ಮೂಲದ ರಮೇಶ್ ಮೃತಪಟ್ಟಿದ್ದಾನೆ.
ಮೃತ ದೇಹಗಳ ಮರಣೋತ್ತರ ಪರೀಕ್ಷೆ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಸಿ ನಂತರ ಮೃತ ದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮೂವರು ಕೈದಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್ ಆಸ್ಪತ್ರೆಯ ವೈದ್ಯ ದಿನೇಶ್ ಪ್ರತಿಕ್ರಿಯಿಸಿದ್ದು, ಮೂವರು ಕೈದಿಗಳು ಎಸೆನ್ಸ್ ಸೇವನೆಯಿಂದಲೇ ಮೃತ ಪಟ್ಟಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಮೂವರು ಖೈದಿಗಳು ಜೈಲಿನಲ್ಲಿ ಬೇಕರಿ ಪದಾರ್ಥಗಳನ್ನು ತಯಾರು ಮಾಡುತ್ತಿದ್ದರು. ವಾಂತಿ ಭೇದಿ ಎಂದು ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆರಂಭದಲ್ಲಿ ಎಸೆನ್ಸ್ ಸೇವನೆಯ ಬಗ್ಗೆ ಕೈದಿಗಳು ಮಾಹಿತಿ ನೀಡಲಿಲ್ಲ. ಫುಡ್ ಪಾಯಿಸನ್ ವಿಚಾರಕ್ಕೆ ಚಿಕಿತ್ಸೆ ಕೊಡುತ್ತಿದ್ದೇವು. ಒಂದೇ ದಿನದಲ್ಲಿ ಅಂಗಾಂಗ ವೈಫಲ್ಯ ಆಗಲು ಶುರು ಆಯಿತು. ನಂತರ ವಿಚಾರಣೆ ಮಾಡಿದಾಗ ರಮೇಶ್ ಎಸೆನ್ಸ್ ಸೇವನೆಯ ಬಗ್ಗೆ ಮಾಹಿತಿ ನೀಡಿದರು. ಆದರೆ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಾಗಲಿಲ್ಲ. ಯಾಕಂದ್ರೆ ಮೂವರು ಕೂಡ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದರು. ವರದಿ ಬಂದ ನಂತರವಷ್ಟೇ ಮೂವರ ಸಾವಿಗೆ ನಿಖರ ಕಾರಣ ತಿಳಿಯಲಿದೆ.
Click