ನ್ಯೂಸ್ ನಾಟೌಟ್ : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಫೆ.21 ಮತ್ತು22ರಂದು ನಡೆಯಲಿರುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಡಾ| ಪ್ರಭಾಕರ ಶಿಶಿಲ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ. ಸಾಹಿತಿಯಾಗಿ, ವಾಗ್ಮಿಯಾಗಿ, ಬರಹಗಾರರಾಗಿ, ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿರುವ ಡಾ| ಪ್ರಭಾಕರ ಶಿಶಿಲರಿಗೆ ಒಲಿದಿರುವ ಗೌರವ ಸುಳ್ಯದ ಪಾಲಿಗೆ ಅವಿಸ್ಮರಣೀಯವಾಗಿದೆ.
ಸುಳ್ಯ ತಾಲೂಕಿನ ಕೂತುಕುಂಜ ಕಜೆಯಲ್ಲಿ ಹುಟ್ಟಿ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಬೆಳೆದು, ಸುಳ್ಯದಲ್ಲಿ ನೆಲೆಸಿರುವ ಡಾ। ಪ್ರಭಾಕರ ಶಿಶಿಲರು ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಕನ್ನಡದ ಶ್ರೇಷ್ಠ ಸಾಹಿತಿ. ಕನ್ನಡದಲ್ಲಿ 10 ಕಾದಂಬರಿ, 8 ಕಥಾ ಸಂಕಲನ, 5 ಪ್ರವಾಸ ಕಥನ ಸೇರಿ ಒಟ್ಟು 54 ಸೃಜನಶೀಲ ಕೃತಿಗಳು, 165 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು ಹಾಗೂ ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳನ್ನು ರಚಸಿದ್ದಾರೆ. ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಇವರ ಸುಮಾರು 250ಕ್ಕೂ ಅಧಿಕ ಲೇಖನಗಳು ಪ್ರಕಟವಾಗಿವೆ. ಅನೇಕ ಲಾವಣಿ ಮತ್ತು ಗೀಗೀ ಪದ ರಚಿಸಿದ್ದಾರೆ. ಇವರು ಬರೆದ ಪುಂಸ್ತ್ರೀ ಕೃತಿ ಸಂಸ್ಕೃತ, ಹಿಂದಿ, ಮಲಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ, ಕೊಡವ, ಗುಜರಾಥಿ, ಬೆಂಗಾಲಿ, ಪಂಜಾಬಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.